2025ರ ಏಶ್ಯಕಪ್: ಭಾರತ ಕ್ರಿಕೆಟ್ ತಂಡದ ಘೋಷಣೆಗೆ ತಯಾರಿ
Photo : ICC
ಹೊಸದಿಲ್ಲಿ, ಆ.10: ಯುಎಇನಲ್ಲಿ ಸೆಪ್ಟಂಬರ್ 9ರಿಂದ 28ರ ತನಕ ನಡೆಯಲಿರುವ ಏಶ್ಯಕಪ್ ಕ್ರಿಕೆಟ್ ಟೂರ್ನಮೆಂಟ್‌ಗೆ ತನ್ನ ತಂಡವನ್ನು ಪ್ರಕಟಿಸಲು ಭಾರತ ತಂಡ ಸಿದ್ಧತೆ ನಡೆಸಿದೆ. ತಂಡದ ಆಯ್ಕೆಗೆ ಸಂಬಂಧಿಸಿ ಮಾಜಿ ಕ್ರಿಕೆಟಿಗ ಪ್ರಿಯಾಂಕ್ ಪಾಂಚಾಲ್ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಭಾರತ ತಂಡವು 2025ರ ಫೆಬ್ರವರಿಯಲ್ಲಿ ಕೊನೆಯ ಬಾರಿ ಟಿ-20 ಪಂದ್ಯದಲ್ಲಿ ಆಡಿದೆ. ಸ್ವದೇಶದಲ್ಲಿ ನಡೆದಿದ್ದ ಸರಣಿಯಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡದ ವಿರುದ್ಧ 4-1 ಅಂತರದಿಂದ ಜಯಶಾಲಿಯಾಗಿತ್ತು. ಇತ್ತೀಚೆಗಿನ ಟಿ-20 ಸರಣಿಯ ವೇಳೆ ಅಗ್ರ ಸರದಿಯಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಖಾಯಂ ಆಟಗಾರರಾಗಿದ್ದಾರೆ.
ಟೆಸ್ಟ್ ನಾಯಕ ಶುಭಮನ್ ಗಿಲ್, ಬಿ.ಸಾಯಿ ಸುದರ್ಶನ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ 2025ರ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ಬ್ಯಾಟಿಂಗ್ ಸರದಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಅಜಿತ್ ಅಗರ್ಕರ್ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯು ಈ ತಿಂಗಳು ತನ್ನ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
‘‘ಟಿ-20 ಕ್ರಿಕೆಟ್‌ನಲ್ಲಿ ಅಂತ್ಯವಿಲ್ಲದ ಚರ್ಚೆ ಹಾಗೂ ವಿಶ್ಲೇಷಣೆಗಾಗಿ ಬ್ಯಾಟಿಂಗ್ ಸರದಿಯ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದೇವೆ. ಅತ್ಯುತ್ತಮ ಆರಂಭಿಕರು, ಅತ್ಯುತ್ತಮ ಫಿನಿಶರ್‌ಗಳನ್ನು ಆಯ್ಕೆ ಮಾಡಿ ಉಳಿದೆಲ್ಲವೂ ಪರಿಸ್ಥಿತಿಗೆ ತಕ್ಕಂತೆ ನಡೆಯುತ್ತದೆ’’ ಎಂದು ಪಾಂಚಾಲ್ ರವಿವಾರ ಎಕ್ಸ್‌ನಲ್ಲಿ ಬರೆದಿದ್ದಾರೆ.
ಏಶ್ಯಕಪ್ ಟೂರ್ನಿಯಲ್ಲಿ ಭಾರತ ತಂಡವು ‘ಎ’ ಗುಂಪಿನಲ್ಲಿದ್ದು, ಕ್ರಮವಾಗಿ ಸೆಪ್ಟಂಬರ್ 10 ಹಾಗೂ 14 ರಂದು ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಯುಎಇ ಹಾಗೂ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಆ ನಂತರ ಸೆಪ್ಟಂಬರ್ 19ರಂದು ಅಬುಧಾಬಿಯಲ್ಲಿ ಒಮಾನ್ ತಂಡವನ್ನು ಮುಖಾಮುಖಿಯಾಗಲಿದೆ.
ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್ ತಂಡಗಳಿವೆ. ‘ಬಿ’ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಹಾಂಕಾಂಗ್ ತಂಡಗಳಿವೆ.
2026ರ ಪುರುಷರ ಟಿ-20 ವಿಶ್ವಕಪ್‌ಗೆ ತಯಾರಿ ನಡೆಸುವ ಉದ್ದೇಶದಿಂದ ಈ ಬಾರಿ ಏಶ್ಯಕಪ್ ಅನ್ನು ಟಿ-20 ಮಾದರಿಯಲ್ಲಿ ಆಡಲಾಗುತ್ತದೆ.
ಪಂದ್ಯಾವಳಿಯಲ್ಲಿ ಪ್ರತೀ ಗುಂಪಿನ ಎರಡು ತಂಡಗಳು ಸೂಪರ್-4 ಹಂತಕ್ಕೆ ತೇರ್ಗಡೆಯಾಗುತ್ತವೆ. ಅಗ್ರ ಎರಡು ತಂಡಗಳು ಸೆಪ್ಟಂಬರ್ 28ರಂದು ದುಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸ್ಪರ್ಧಿಸಲಿವೆ.
ಸದ್ಯ ಭಾರತ ತಂಡದ ಬಳಿ ಏಶ್ಯಕಪ್ ಟ್ರೋಫಿ ಇದೆ. ಕೊಲಂಬೊದಲ್ಲಿ 50 ಓವರ್ ಮಾದರಿಯ ಏಶ್ಯಕಪ್ ಟೂರ್ನಿಯ ಫೈನಲ್ನಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.
ಈ ಹಿಂದಿನ ಟಿ-20 ಮಾದರಿಯ ಏಶ್ಯಕಪ್ ಟೂರ್ನಿಯು 2022ರಲ್ಲಿ ನಡೆದಿತ್ತು. ಆಗ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು.