×
Ad

ಏಶ್ಯನ್ ಗೇಮ್ಸ್| ಟೆನಿಸ್: ರಾಮ್‍ಕುಮಾರ್-ಸಾಕೇತ್ ಜೋಡಿ ಫೈನಲ್‍ಗೆ

Update: 2023-09-28 23:46 IST

Photo- PTI

ಹಾಂಗ್‍ಝೌ (ಚೀನಾ): ಹತ್ತೊಂಭತ್ತನೇ ಏಶ್ಯನ್ ಗೇಮ್ಸ್ ನಲ್ಲಿ ಗುರುವಾರ ಟೆನಿಸ್ ಪುರುಷರ ಡಬಲ್ಸ್‍ನಲ್ಲಿ ಭಾರತದ ರಾಮ್‍ಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ಫೈನಲ್ ತಲುಪಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕವೊಂದು ಖಚಿತವಾಗಿದೆ.

ಅದೇ ವೇಳೆ, ಮಿಶ್ರ ಡಬಲ್ಸ್‍ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಸೆಮಿಫೈನಲ್ ತಲುಪಿದ್ದಾರೆ. ಆ ಮೂಲಕ ಪದಕವೊಂದನ್ನು ಖಾತರಿಪಡಿಸಿಕೊಂಡಿದ್ದಾರೆ.

ಎರಡನೇ ಶ್ರೇಯಾಂಕದ ರಾಮ್‍ಕುಮಾರ್-ಮೈನೇನಿ ಜೋಡಿಯು ಸೆಮಿಫೈನಲ್‍ನಲ್ಲಿ ದಕ್ಷಿಣ ಕೊರಿಯದ ಸಿಯೊಂಗ್ಚಾನ್ ಹೊಂಗ್ ಮತ್ತು ಸೂನ್‍ವೂ ಕ್ವೋನ್ ಜೋಡಿಯನ್ನು 6-1, 6-7(8), 10-0 ಸೆಟ್‍ಗಳಿಂದ ಸೋಲಿಸಿತು.

ಶುಕ್ರವಾರ ನಡೆಯುವ ಫೈನಲ್‍ನಲ್ಲಿ ಭಾರತೀಯ ತಂಡವು ಚೈನೀಸ್ ತೈಪೆಯನ್ನು ಎದುರಿಸಲಿದೆ.

ಮಿಶ್ರ ಡಬಲ್ಸ್ ಕ್ವಾರ್ಟರ್‍ಫೈನಲ್‍ನಲ್ಲಿ ಎರಡನೇ ಶ್ರೇಯಾಂಕದ ಬೋಪಣ್ಣ-ಭೋಸಲೆ ಜೋಡಿಯು ಕಝಖ್‍ಸ್ತಾನದ ಶಿಬೆಕ್ ಕುಲಂಬಯೆವ ಮತ್ತು ಗ್ರಿಗೊರಿಯ್ ಲೋಮಕಿನ್ ಜೋಡಿಯನ್ನು 7-5, 6-3 ಸೆಟ್‍ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿತು.

43 ವರ್ಷದ ಬೋಪಣ್ಣ ತನ್ನ ಕೊನೆಯ ಏಶ್ಯನ್ ಗೇಮ್ಸ್ ಆಡುತ್ತಿದ್ದಾರೆ.

►ಹಾಕಿ: ಜಪಾನ್‍ಗೆ 4-2ರ ಸೋಲುಣಿಸಿದ ಭಾರತ

ಹಾಂಗ್‍ಝೌನಲ್ಲಿ ನಡೆಯುತ್ತಿರುವ 19ನೇ ಏಶ್ಯನ್ ಗೇಮ್ಸ್‍ನ ಪುರುಷರ ಹಾಕಿ ಸ್ಪರ್ಧೆಯಲ್ಲಿ ಗುರುವಾರ ಭಾರತವು ಅಭಿಶೇಕ್‍ರ ಅವಳಿ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಜಪಾನನ್ನು 4-2 ಗೋಲುಗಳಿಂದ ಸೋಲಿಸಿದೆ.

ಇದು ಭಾರತದ ಸತತ ಮೂರನೇ ಜಯವಾಗಿದೆ. ಈ ಮೂಲಕ ಅದು ಸೆಮಿಫೈನಲ್‍ನತ್ತ ಸದೃಢ ಹೆಜ್ಜೆಗಳನ್ನು ಇಟ್ಟಿದೆ.

ಅಭಿಶೇಕ್ 13 ಮತ್ತು 48ನೇ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಸಿಡಿಸಿದರು. ಭಾರತದ ಇತರ ಎರಡು ಗೋಲುಗಳನ್ನು ಮನ್‍ದೀಪ್ ಸಿಂಗ್ 24ನೇ ನಿಮಿಷದಲ್ಲಿ ಮತ್ತು ಅಮಿತ್ ರೋಹಿದಾಸ್ 34ನೇ ನಿಮಿಷದಲ್ಲಿ ಬಾರಿಸಿದರು.

ಜಪಾನ್ ಪಂದ್ಯದ ಕೊನೆಯ ಹಂತದಲ್ಲಿ ಪ್ರತಿರೋಧ ನೀಡಿತು. ಅದರ ಪರವಾಗಿ ಗೆಂಕಿ ಮಿಟನಿ 57ನೇ ನಿಮಿಷದಲ್ಲಿ ಮತ್ತು ರಯೋಸೆಲ್ ಕಟೊ 60ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.

ಶನಿವಾರ ನಡೆಯಲಿರುವ ತನ್ನ ‘ಎ’ ಬಣದ ಮುಂದಿನ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News