Asian Para Games | ಪ್ರಮೋದ್ ಭಗತ್, ಭಾವಿನಾ ಪಟೇಲ್ ಭಾರತದ ಧ್ವಜಧಾರಿಗಳು
| ಭಾವಿನಾ ಪಟೇಲ್ , ಪ್ರಮೋದ್ ಭಗತ್| Instagram
ಹೊಸದಿಲ್ಲಿ, ಅ. 7: ಐಚಿ-ನಗೋಯದಲ್ಲಿ 21 ಚಿನ್ನ ಸಹಿತ ಒಟ್ಟು 85 ಪದಕಗಳನ್ನು ಜಯಿಸಿ ಪದಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಭಾರತದ ಕ್ರೀಡಾಪಟುಗಳು ಏಶ್ಯನ್ ಗೇಮ್ಸ್ನಲ್ಲಿ ಯಶಸ್ವಿ ಅಭಿಯಾನ ನಡೆಸಿದ್ದರು. ಇದೀಗ ದೇಶದ ಪ್ಯಾರಾ ಅತ್ಲೀಟ್ ಗಳು ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಪ್ಯಾರಾಲಿಂಪಿಕ್ ಚಾಂಪಿಯನ್ಸ್ ಪ್ರಮೋದ್ ಭಗತ್ ಹಾಗೂ ಭಾವಿನಾ ಪಟೇಲ್ ಜಪಾನಿನ ನಗೋಯದಲ್ಲಿ ಅಕ್ಟೋಬರ್ 18ರಂದು ನಡೆಯಲಿರುವ ಏಶ್ಯನ್ ಪ್ಯಾರಾ ಗೇಮ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ ಆಯ್ಕೆಯಾಗಿದ್ದಾರೆ. ಏಶ್ಯನ್ ಪ್ಯಾರಾ ಗೇಮ್ಸ್ ಅ. 24ರ ತನಕ ನಡೆಯಲಿದೆ.
ಭಾರತದ ಓರ್ವ ಯಶಸ್ವಿ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರನಾಗಿರುವ ಭಗತ್ 2014 ಹಾಗೂ 2023ರ ನಡುವೆ ಎರಡು ಚಿನ್ನ ಹಾಗೂ ನಾಲ್ಕು ಕಂಚು ಸಹಿತ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಒಟ್ಟು ಆರು ಪದಕ ಗಳಿಸಿದ್ದಾರೆ.
ಭಾರತದ ಪ್ರಮುಖ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿಯರ ಪೈಕಿ ಒಬ್ಬರಾಗಿರುವ ಭಾವಿನಾ ಪಟೇಲ್ 2018 ಹಾಗೂ 2023ರ ನಡುವೆ ಎರಡು ಏಶ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು.
ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ತಂಡವನ್ನು ಮುನ್ನಡೆಸುವುದಕ್ಕೆ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ವಿಚಾರ. ಈ ಗೌರವವು ಭಾರತೀಯ ತಂಡಕ್ಕೆ ಸ್ಫೂರ್ತಿಯಾಗುವ ವಿಶ್ವಾಸವಿದೆ ಎಂದು ಭಾವಿನಾ ಅಭಿಪ್ರಾಯಪಟ್ಟಿದ್ದಾರೆ.
‘‘ಭಾರತದ ಧ್ವಜಧಾರಿಣಿಯಾಗಿ ಆಯ್ಕೆಯಾಗಿರುವುದು ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಪ್ರಮೋದ್ ಅವರೊಂದಿಗೆ ಉದ್ಘಾಟನಾ ಸಮಾರಂಭದಲ್ಲಿ ನಮ್ಮ ತಂಡವನ್ನು ಮುನ್ನಡೆಸಲು ಉತ್ಸುಕನಾಗಿರುವೆ. ನಮ್ಮ ಎಲ್ಲ ಕ್ರೀಡಾಪಟುಗಳು ಆತ್ಮವಿಶ್ವಾಸದೊಂದಿಗೆ ಸ್ಪರ್ಧಿಸುತ್ತಾ, ಪ್ರತಿಕ್ಷಣವನ್ನು ಆನಂದಿಸಿ, ಭಾರತಕ್ಕಾಗಿ ಶ್ರೇಷ್ಠವಾದುದನ್ನು ನೀಡುವ ವಿಶ್ವಾಸ ನನಗಿದೆ’’ ಎಂದು ಪಟೇಲ್ ಹೇಳಿದ್ದಾರೆ.
ಪ್ಯಾರಾಲಿಂಪಿಕ್ಸ್ ಕಮಿಟಿ ಆಫ್ ಇಂಡಿಯಾ (ಪಿಸಿಐ) ಅಕ್ಟೋಬರ್ 8ರಂದು ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಭಾರತೀಯ ತಂಡಕ್ಕೆ ಅಧಿಕೃತವಾಗಿ ಬೀಳ್ಕೊಡುಗೆ ನೀಡಲಿದೆ. ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಮುಖ್ಯ ಅತಿಥಿಯಾಗಿ ಹಾಗೂ ಯುವ ವ್ಯವಹಾರಗಳು ಹಾಗೂ ಕ್ರೀಡಾ ಖಾತೆಯ ರಾಜ್ಯ ಸಚಿವೆ ರಕ್ಷಾ ನಿಖಿಲ್ ಖಡ್ಸೆ ಅವರು ಗೌರವ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಐಚಿ-ನಗೋಯ 2026ರ ಏಶ್ಯನ್ ಪ್ಯಾರಾ ಗೇಮ್ಸ್ ಏಶ್ಯಾದಾದ್ಯಂತದ ಪ್ಯಾರಾ ಕ್ರೀಡಾಪಟುಗಳನ್ನು ಒಗ್ಗೂಡಿಸಲಿದ್ದು, ಪ್ರಮುಖ ಅಂತರ್ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವು ತನ್ನ ಯಶಸ್ಸನ್ನು ಮತ್ತಷ್ಟು ವಿಸ್ತರಿಸುವ ಗುರಿ ಇಟ್ಟುಕೊಂಡಿದೆ.