ಪೆಡ್ರೊ ರೊಡ್ರಿಗಸ್ | Photo Credit : NDTV 

ಬಾರ್ಸಿಲೋನ (ಸ್ಪೇನ್), ಅ. 7: ಬಾರ್ಸಿಲೋನ ಮತ್ತು ಸ್ಪೇನ್ ತಂಡಗಳ ಮಾಜಿ ಆಟಗಾರ ಪೆಡ್ರೊ ರೊಡ್ರಿಗಸ್ ಬುಧವಾರ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದ್ದು, ತನ್ನ ಸುದೀರ್ಘ ಭವ್ಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

‘‘ಇದು ಸರಿಯಾದ ಸಮಯ ಎಂದು ನನಗೆ ಅನಿಸುತ್ತಿದೆ. ಜೀವನದಲ್ಲಿ ಒಂದು ಹೆಜ್ಜೆ ಮುಂದಿಡಲು ಮತ್ತು ಹೊಸ ಅಧ್ಯಾಯವೊಂದನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತಿದೆ’’ ಎಂದು ಪೆಡ್ರೊ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2011ರಲ್ಲಿ ಪೆಪ್ ಗ್ವಾರ್ಡಿಯೋಲಾ ಕೋಚ್ ಆಗಿದ್ದ ಬಾರ್ಸಿಲೋನ ತಂಡವು ಲಾ ಲಿಗಾ, ಚಾಂಪಿಯನ್ಸ್ ಲೀಗ್ ಮತ್ತು ಕೋಪಾ ಡೆಲ್ ರೇ– ಈ ಮೂರು ಪ್ರಶಸ್ತಿಗಳನ್ನು ಗೆದ್ದಿತ್ತು. ಆ ತಂಡದಲ್ಲಿ ಫಾರ್ವರ್ಡ್ ಆಟಗಾರ ರೊಡ್ರಿಗಸ್ ಪ್ರಮುಖ ಸದಸ್ಯರಾಗಿದ್ದರು. 2015ರಲ್ಲಿ ಲೂಯಿಸ್ ಎನ್ರಿಕೆ ಅವರ ಅಡಿಯಲ್ಲಿ ಈ ಸಾಧನೆಯನ್ನು ಪುನರಾವರ್ತಿಸಿದ ಬಾರ್ಸಿಲೋನ ತಂಡದ ಭಾಗವಾಗಿಯೂ ಅವರು ಇದ್ದರು.

2010ರಲ್ಲಿ ಸ್ಪೇನ್ ತಂಡವು ತನ್ನ ಚೊಚ್ಚಲ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಾಗಲೂ ಅವರು ತಂಡದಲ್ಲಿದ್ದರು. ಎರಡು ವರ್ಷಗಳ ನಂತರ ಯುರೋ ಕಪ್ ಗೆಲ್ಲುವ ಮೂಲಕ ತನ್ನ ಟ್ರೋಫಿಗಳ ಸಂಖ್ಯೆಯನ್ನು ಅವರು ಮತ್ತಷ್ಟು ಹೆಚ್ಚಿಸಿಕೊಂಡರು.

39 ವರ್ಷದ ಪೆಡ್ರೊ 2015ರಲ್ಲಿ ಚೆಲ್ಸಿ ತಂಡವನ್ನು ಸೇರಿದ ಬಳಿಕ ಇಂಗ್ಲೆಂಡ್ನಲ್ಲೂ ಯಶಸ್ಸು ಕಂಡರು ಹಾಗೂ ಆಂಟೋನಿಯೊ ಕೊಂಟೆ ಅವರ ಉಸ್ತುವಾರಿಯಲ್ಲಿ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅವರು ತಮ್ಮ ಕೊನೆಯ ಐದು ಋತುಗಳನ್ನು ಲಾಜಿಯೊ ಕ್ಲಬ್ನಲ್ಲಿ ಕಳೆದರು ಮತ್ತು 2025–26ರ ಋತುವಿನ ಮುಕ್ತಾಯದ ನಂತರ ಅಲ್ಲಿಂದ ಹೊರಬಂದರು.

ಕ್ಲಬ್ ಮಟ್ಟದಲ್ಲಿ 794 ಪಂದ್ಯಗಳನ್ನಾಡಿರುವ ಪೆಡ್ರೊ 197 ಗೋಲುಗಳನ್ನು ಗಳಿಸಿದ್ದಾರೆ ಹಾಗೂ ಸ್ಪೇನ್ ರಾಷ್ಟ್ರೀಯ ತಂಡದ ಪರವಾಗಿ 65 ಪಂದ್ಯಗಳಲ್ಲಿ 17 ಗೋಲುಗಳನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor