ಒಲಿಂಪಿಕ್ಸ್ ಆತಿಥ್ಯ: ತಿಂಗಳ ಕೊನೆಯಲ್ಲಿ ಭಾರತದಿಂದ IOC ಮುಂದೆ ಪ್ರಾತ್ಯಕ್ಷಿಕೆ
ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ , ಪಿ. ಟಿ. ಉಷಾ | Photo Credit : sportstar.thehindu.com
ಹೊಸದಿಲ್ಲಿ, ಅ. 7: 2036ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಭಾರತದ ಪ್ರಯತ್ನವು ‘‘ಒಂದಾಗಿ ಮುನ್ನಡೆಯುವುದು’’ ಎಂಬ ಪರಿಕಲ್ಪನೆಯ ಸುತ್ತ ಕೇಂದ್ರೀಕೃತವಾಗಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷೆ ಪಿ. ಟಿ. ಉಷಾ ಬುಧವಾರ ಹೇಳಿದ್ದಾರೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)ಯ ‘ಫ್ಯೂಚರ್ ಹೋಸ್ಟ್ ಕಮಿಷನ್’ ಎದುರು ಈ ತಿಂಗಳ ಕೊನೆಯಲ್ಲಿ ಮೊದಲ ಪ್ರಾಜೆಕ್ಟ್ ಪ್ರಾತ್ಯಕ್ಷಿಕೆಯನ್ನು ನೀಡಲಾಗುವುದು ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.
2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಆಸಕ್ತಿ ವ್ಯಕ್ತಪಡಿಸಿರುವ ಏಳು ದೇಶಗಳಲ್ಲಿ ಭಾರತ, ಜರ್ಮನಿ, ಖತರ್ ಮತ್ತು ಟರ್ಕಿ ಸೇರಿವೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಂಗಳವಾರ ತಿಳಿಸಿದೆ. IOCಯ ಫ್ಯೂಚರ್ ಹೋಸ್ಟ್ ಕಮಿಷನ್ ಎದುರು ತಮ್ಮ ಕ್ರೀಡಾಕೂಟದ ಯೋಜನೆಗಳ ಪ್ರಾತ್ಯಕ್ಷಿಕೆ ನೀಡಲು ಈ ದೇಶಗಳನ್ನು ಆಹ್ವಾನಿಸಲಾಗಿದೆ ಎಂಬುದಾಗಿಯೂ ಅದು ಹೇಳಿದೆ.
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ಭಾರತದಲ್ಲಿ ಈವರೆಗೆ ಒಮ್ಮೆಯೂ ನಡೆದಿಲ್ಲ. 2036ರಲ್ಲಿ ಈ ಕ್ರೀಡಾಕೂಟದ ಆತಿಥ್ಯ ವಹಿಸಲು ಭಾರತವು ಅಹ್ಮದಾಬಾದ್ ನಗರವನ್ನು ಆಯ್ಕೆ ಮಾಡಿಕೊಂಡಿದೆ. ಭಾರತವು 2024ರಲ್ಲಿ ಈ ಕ್ರೀಡಾಕೂಟದ ಆತಿಥ್ಯ ವಹಿಸಲು ತನ್ನ ಆಸಕ್ತಿ ಪತ್ರವನ್ನು ಸಲ್ಲಿಸಿತ್ತು.