ನೇಹಾ ಸಾಂಗ್ವಾನ್ | Photo Credit : PTI 

ಹೊಸದಿಲ್ಲಿ, ಅ. 7: 2024ರ U17 ವಿಶ್ವ ಚಾಂಪಿಯನ್ ನೇಹಾ ಸಾಂಗ್ವಾನ್ ಸೇರಿದಂತೆ ಭಾರತದ ಕೆಲವು ಕುಸ್ತಿಪಟುಗಳಿಗೆ ಅಮೆರಿಕವು ವೀಸಾ ನಿರಾಕರಿಸಿದ್ದು, ವಿಶ್ವ 23 ವರ್ಷದೊಳಗಿನವರ ಚಾಂಪಿಯನ್ಶಿಪ್ ನಲ್ಲಿ ಅವರ ಪಾಲ್ಗೊಳ್ಳುವಿಕೆ ಅನುಮಾನವಾಗಿದೆ.

ಈ ಚಾಂಪಿಯನ್ಶಿಪ್ ಲಾಸ್ ವೇಗಸ್ ನಲ್ಲಿ ಇದೇ 12ರಿಂದ 18ರ ತನಕ ನಿಗದಿಯಾಗಿದೆ. ‘20 ವರ್ಷದೊಳಗಿನವರು ಹಾಗೂ ನಿರುದ್ಯೋಗಿಗಳು’ ಎಂಬ ಕಾರಣ ನೀಡಿ ವೀಸಾ ನಿರಾಕರಿಸಿರುವ ವಿಷಯವನ್ನು ಕುಸ್ತಿಪಟುಗಳಿಗೆ ಮೌಖಿಕವಾಗಿ ತಿಳಿಸಲಾಗಿದೆ. ಬುಧವಾರ ರಾಯಭಾರ ಕಚೇರಿಯಲ್ಲಿ ಸಂದರ್ಶನದ ವೇಳೆ ನೀಡಿದ್ದ ಅವರ ಪಾಸ್ಪೋರ್ಟ್ಗಳನ್ನೂ ಹಿಂತಿರುಗಿಸಲಾಗಿದೆ.

ವೀಸಾ ನಿರಾಕರಣೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತದ ಕುಸ್ತಿ ಒಕ್ಕೂಟವು ಹೊಸದಿಲ್ಲಿಯ ಅಮೆರಿಕದ ರಾಯಭಾರ ಕಚೇರಿಗೆ ಮನವಿ ಮಾಡಿದೆ. ಗುರುವಾರ ನಿಗದಿಯಾಗಿರುವ ಸಂದರ್ಶನಕ್ಕೆ ಹಾಜರಾಗಲಿರುವ ಕುಸ್ತಿಪಟುಗಳಿಗೆ ವೀಸಾ ನೀಡುವಂತೆಯೂ ಕೋರಿದೆ.

ಅಮೆರಿಕದ ರಾಯಭಾರ ಕಚೇರಿಗೆ ಡಬ್ಲ್ಯುಎಫ್ಐ ಬರೆದಿರುವ ಪತ್ರದ ಪ್ರಕಾರ, ಬುಧವಾರ 9 ಮಂದಿ ಕುಸ್ತಿಪಟುಗಳಿಗೆ ವೀಸಾ ನಿರಾಕರಿಸಲಾಗಿದೆ. 24 ಮಂದಿ ವೀಸಾಕ್ಕಾಗಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ 16 ಮಂದಿ ಕುಸ್ತಿಪಟುಗಳಿದ್ದರು. ಉದ್ಯೋಗದ ಸ್ಥಾನಮಾನ ಹಾಗೂ 20 ವರ್ಷದೊಳಗಿನವರು ಎಂಬ ಕಾರಣ ನೀಡಿ ದುರದೃಷ್ಟವಶಾತ್ 9 ಮಂದಿಗೆ ವೀಸಾ ನಿರಾಕರಿಸಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಈ ಚಾಂಪಿಯನ್ ಶಿಪ್ 23 ವರ್ಷದೊಳಗಿನವರಿಗಾಗಿ ಇದ್ದು, 18ರಿಂದ 23 ವರ್ಷದೊಳಗಿನವರು ಭಾಗವಹಿಸಬೇಕಾಗುತ್ತದೆ ಎಂದು ಫೆಡರೇಶನ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor