×
Ad

ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್ | ಭಾರತದ ಮಹಿಳೆಯರ 50 ಮೀ. ರೈಫಲ್ 3-ಪೊಸಿಶನ್ಸ್ ಟೀಮ್‌ ಗೆ ಚಿನ್ನದ ಪದಕ

Update: 2025-08-26 21:58 IST

PC:  @SportsIndia3

ಹೊಸದಿಲ್ಲಿ, ಆ.26: ಒಲಿಂಪಿಯನ್ ಸಿಫ್ಟ್ ಕೌರ್ ಸಮ್ರಾ ಮುಂದಾಳತ್ವದಲ್ಲಿ ಮಂಗಳವಾರ ನಡೆದ ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ ನ ಮಹಿಳೆಯರ 50 ಮೀ. ರೈಫಲ್ 3-ಪೊಸಿಶನ್ಸ್ ಟೀಮ್ ವಿಭಾಗದಲ್ಲಿ ಭಾರತ ತಂಡವು ಚಿನ್ನದ ಪದಕ ಗೆದ್ದುಕೊಂಡಿದೆ.

ವಿಶ್ವ ದಾಖಲೆ ನಿರ್ಮಿಸಿರುವ ಸಿಫ್ಟ್ ಕೌರ್ ಅವರು ಅನುಭವಿ ಶೂಟರ್‌ಗಳಾದ ಅಂಜುಮ್ ಮೌದ್ಗಿಲ್ ಹಾಗೂ ಅಶಿ ಚೌಕ್‌ಸೆ ಅವರೊಂದಿಗೆ ಬಂಗಾರಕ್ಕೆ ಗುರಿ ಇಟ್ಟರು.

ಸಿಫ್ಟ್ ಕೌರ್ 589 ಅಂಕ ಗಳಿಸಿದರೆ, ಆಶಿ 586 ಹಾಗೂ ಅಂಜುಮ್ 578 ಅಂಕ ಗಳಿಸಿದರು. ಭಾರತವು ಒಟ್ಟು 1,753 ಅಂಕ ಗಳಿಸಿ ಮೊದಲ ಸ್ಥಾನ ಪಡೆದರೆ, ಜಪಾನ್(1,750)ಹಾಗೂ ದಕ್ಷಿಣ ಕೊರಿಯಾ(1,745)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದವು.

ಅರ್ಹತಾ ಸುತ್ತಿನಲ್ಲಿ 2ನೇ ಹಾಗೂ ಐದನೇ ಸ್ಥಾನ ಪಡೆದಿರುವ ಕೌರ್ ಹಾಗೂ ಆಶಿ ವೈಯಕ್ತಿಕ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದರು. ಭಾರತದ ಇನ್ನೋರ್ವ ಶೂಟರ್ ಶ್ರೀಯಾಂಕಾ ಸದಂಡಿ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನ ಪಡೆದರು. ಆದರೆ ಅವರು ರ್ಯಾಂಕಿಂಗ್ ಪಾಯಿಂಟ್ಸ್ ಓನ್ಲೀ(ಆರ್‌ಪಿಒ)ವಿಭಾಗದಲ್ಲಿ ಸ್ಪರ್ಧಿಸಿದರು.

41 ಶೂಟರ್‌ಗಳಿದ್ದ ಅರ್ಹತಾ ಸುತ್ತಿನಲ್ಲಿ ಎರಡು ಬಾರಿಯ ಒಲಿಂಪಿಯನ್ ಅಂಜುಮ್ 22ನೇ ಸ್ಥಾನ ಪಡೆದರು.

ಇದಕ್ಕೂ ಮೊದಲು ನ್ಯಾಶನಲ್ ಗೇಮ್ಸ್ ಚಾಂಪಿಯನ್ ನೀರೂ ಧಂಡಾ ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ. ತನ್ನ ವೃತ್ತಿಜೀವನದಲ್ಲಿ ಮಹತ್ವದ ಸಾಧನೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News