ಮಹಿಳೆಯರ ಏಕದಿನ ವಿಶ್ವಕಪ್ : ಶ್ರೀಲಂಕಾ-ಆಸ್ಟ್ರೇಲಿಯ ಪಂದ್ಯ ಮಳೆಗಾಹುತಿ
Photo Credit : AFP
ಕೊಲಂಬೊ, ಅ.4: ನಿರಂತರ ಸುರಿದ ಮಳೆಯಿಂದಾಗಿ ಶನಿವಾರ ಇಲ್ಲಿ ನಡೆಯಬೇಕಾಗಿದ್ದ ಆತಿಥೇಯ ಶ್ರೀಲಂಕಾ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡಗಳ ನಡುವಿನ ಮಹಿಳೆಯರ ವಿಶ್ವಕಪ್ ಟೂರ್ನಿಯ 5ನೇ ಲೀಗ್ ಪಂದ್ಯವು ಒಂದು ಎಸೆತ ಕಾಣದೇ ರದ್ದಾಗಿದೆ.
ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ. ಶುಕ್ರವಾರ ಶ್ರೀಲಂಕಾದ ವಾತಾವರಣ ಪಂದ್ಯಕ್ಕೆ ಪೂರಕವಾಗಿತ್ತು. ಶನಿವಾರ ಟಾಸ್‌ಗಿಂತ ಮೊದಲು ಉಭಯ ತಂಡಗಳು ಮೈದಾನಕ್ಕಿಳಿದು ಪಿಚ್ ಪರೀಕ್ಷಿಸಿದ್ದವು. ಆದರೆ ತಕ್ಷಣವೇ ಮಳೆ ಸುರಿಯಲಾರಂಭಿಸಿದೆ. ಇಡೀ ಮೈದಾನಕ್ಕೆ ಹೊದಿಕೆ ಹಾಸಿದ್ದರೂ ಎರಡೂವರೆ ಗಂಟೆ ಕಾದ ನಂತರ ಪಂದ್ಯವನ್ನು ರದ್ದುಪಡಿಸಲಾಯಿತು.
ಆಸ್ಟ್ರೇಲಿಯವು ಇಂದೋರ್‌ನಲ್ಲಿ ಆಡಿದ್ದ ತನ್ನ ಮೊದಲ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 89 ರನ್‌ಗಳಿಂದ ಮಣಿಸಿತ್ತು. ಮತ್ತೊಂದೆಡೆ ಶ್ರೀಲಂಕಾ ತಂಡವು ಗುವಾಹಟಿಯಲ್ಲಿ ಭಾರತದ ವಿರುದ್ಧ ಆಡಿದ ಪಂದ್ಯವನ್ನು ಡಿಎಲ್ ನಿಯಮದಡಿ 59 ರನ್‌ಗಳಿಂದ ಸೋತಿತ್ತು.
ಆಸ್ಟ್ರೇಲಿಯ ತಂಡವು 3 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಶ್ರೀಲಂಕಾ 5ನೇ ಸ್ಥಾನಕ್ಕೇರಿದ್ದರೂ ನೆಟ್ರನ್ರೇಟ್ ನೆಗೆಟಿವ್ (-1.255)ಆಗಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯ ಫೇವರಿಟ್ ಆಗಿತ್ತು. 11 ಏಕದಿನ ಹಾಗೂ 8 ಟಿ-20 ಪಂದ್ಯಗಳಲ್ಲಿ ಶ್ರೀಲಂಕಾ ತಂಡಕ್ಕೆ ಆಸೀಸ್ ತಂಡವನ್ನು ಸೋಲಿಸಲು ಸಾಧ್ಯವಾಗಿಲ್ಲ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ರವಿವಾರ ಇದೇ ಮೈದಾನದಲ್ಲಿ ನಡೆಯಲಿದ್ದು, ಹವಾಮಾನ ಮುನ್ಸೂಚನೆಯ ಪ್ರಕಾರ ಆ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.