ಪಾಕಿಸ್ತಾನ ಟೆಸ್ಟ್ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಅಝರ್ ಮಹಮೂದ್ ನೇಮಕ
ಅಝರ್ ಮಹಮೂದ್ | PC: X \ @dhillow_
ಕರಾಚಿ: 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಗಿಂತ ಮೊದಲು ಮಾಜಿ ಆಲ್‌ರೌಂಡರ್ ಅಝರ್ ಮಹಮೂದ್ ಅವರನ್ನು ಟೆಸ್ಟ್ ಕ್ರಿಕೆಟ್ ತಂಡದ ಹಂಗಾಮಿ ಮುಖ್ಯ ಕೋಚ್‌ರನ್ನಾಗಿ ಪಾಕಿಸ್ತಾನ ನೇಮಿಸಿದೆ.
ಪಾಕಿಸ್ತಾನ ತಂಡದಲ್ಲಿ ದೀರ್ಘ ಕಾಲ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಮಹಮೂದ್ ತಮ್ಮ ಪ್ರಸಕ್ತ ಒಪ್ಪಂದದ ಅವಧಿ ಮುಗಿಯುವ ತನಕ ಹೆಚ್ಚುವರಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.
2024ರ ಅಂತ್ಯದಲ್ಲಿ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಜೇಸನ್ ಗಿಲ್ಲೆಸ್ಪಿ ಅವರ ನಿರ್ಗಮನದ ನಂತರ ಹಂಗಾಮಿ ಕೋಚ್ ಆಗಿದ್ದ ಆಕಿಬ್ ಜಾವೇದ್ ಅವರಿಂದ 50ರ ಹರೆಯದ ಮಹಮೂದ್ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ಸಹಾಯಕ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಮಹಮೂದ್, ತಂಡದ ರಣನೀತಿಯಲ್ಲಿ ಮುಖ್ಯ ಪಾತ್ರವಹಿಸಿದ್ದರು. ಎರಡು ಬಾರಿ ಕೌಂಟಿ ಚಾಂಪಿಯನ್ ಶಿಪ್ ಜಯಿಸುವ ಮೂಲಕ ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯ ಎತ್ತಿ ತೋರಿಸಿದ್ದರು.
ಅಝರ್ ಅವರ ಮಾರ್ಗದರ್ಶನದಲ್ಲಿ ಪಾಕಿಸ್ತಾನ ಟೆಸ್ಟ್ ತಂಡವು ಜಾಗತಿಕ ವೇದಿಕೆಯಲ್ಲಿ ಶಿಸ್ತು, ಶಕ್ತಿ ಮುಂದುವರಿಸಲಿದೆ ಎಂದು ಪಿಸಿಬಿ ವಿಶ್ವಾಸ ವ್ಯಕ್ತಪಡಿಸಿದೆ.
ಈ ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಪಾಕಿಸ್ತಾನ ತಂಡಕ್ಕೆ ಮಹಮೂದ್ ಮೊದಲ ಬಾರಿ ಕೋಚಿಂಗ್ ನೀಡಲಿದ್ದಾರೆ.