ನೂತನ ಜಂಟಿ ಕಾರ್ಯದರ್ಶಿ ನೇಮಕಕ್ಕೆ ಮಾ.1ರಂದು ವಿಶೇಷ ಮಹಾಸಭೆ ಕರೆದ ಬಿಸಿಸಿಐ
PC : X\ BCCI
ಹೊಸದಿಲ್ಲಿ: ಮಂಡಳಿಯ ಕಾರ್ಯದರ್ಶಿಯಾಗಿ ಪದೋನ್ನತಿ ಪಡೆದಿರುವ ದೇವಜೀತ್ ಸೈಕಿಯಾ ಅವರಿಂದ ತೆರವಾದ ಜಂಟಿ ಕಾರ್ಯದರ್ಶಿ ಸ್ಥಾನವನ್ನು ತುಂಬಲು ಬಿಸಿಸಿಐ ವಿಶೇಷ ಮಹಾಸಭೆ(ಎಸ್ಜಿಎಂ)ಕರೆದಿದೆ.
ಮಾರ್ಚ್ 1ರಂದು ಮುಂಬೈನಲ್ಲಿ ನಡೆಯಲಿರುವ ಎಸ್ಜಿಎಂನಲ್ಲಿ ನೂತನ ಜಂಟಿ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುತ್ತದೆ.
ಜಯ್ ಶಾ ಡಿಸೆಂಬರ್ 1ರಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡ ನಂತರ ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಸೈಕಿಯಾ ಅವರು ಕಳೆದ ತಿಂಗಳು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ಸಭೆಯ ಕಾರ್ಯಸೂಚಿಯಲ್ಲಿ ಒಂದೇ ಒಂದು ಅಂಶವಿದ್ದು, ಬಿಸಿಸಿಐ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಎಜಿಎಂ ಕುರಿತು ನೋಟಿಸ್ ಕಳುಹಿಸಿದೆ.
ಬಿಸಿಸಿಐ ಕಾರ್ಯದರ್ಶಿ ಹಾಗೂ ಖಜಾಂಚಿಯಂತೆ ಕ್ರಿಕೆಟ್ ಮಂಡಳಿಯ ಹೊಸ ಜಂಟಿ ಕಾರ್ಯದರ್ಶಿ ಆಯ್ಕೆಗೆ ಚುನಾವಣೆ ನಡೆಯುವುದಿಲ್ಲ.
ಜ.12ರಂದು ನಡೆದಿದ್ದ ಎಜಿಎಂನಲ್ಲಿ ಸೈಕಿಯಾ ನೂತನ ಕಾರ್ಯದರ್ಶಿಯಾಗಿ ಹಾಗೂ ಪ್ರಭ್ತೇಜ್ ಸಿಂಗ್ ಭಾಟಿಯಾ ನೂತನ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಎರಡು ತಿಂಗಳೊಳಗೆ ಮತ್ತೊಮ್ಮೆ ಎಜಿಎಂ ಕರೆಯಲಾಗಿದೆ.