ಶಮಿ ದೈಹಿಕ ಕ್ಷಮತೆ ಬಗ್ಗೆ ಯಾವುದೇ ಆತಂಕವಿಲ್ಲ: ಬಂಗಾಳ ಕೋಚ್
Photo CRedit: PTI
ಕೋಲ್ಕತಾ, ಅ. 18: ಸರ್ವೀಸಸ್ ವಿರುದ್ಧದ ರಣಜಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಿಂದ ಮುಹಮ್ಮದ್ ಶಮಿ ಹೊರಗುಳಿದಿರುವ ಬಗ್ಗೆ ಸೃಷ್ಟಿಯಾಗಿರುವ ಊಹಾಪೋಹಗಳನ್ನು ಬಂಗಾಳ ತಂಡದ ಕೋಚ್ ಲಕ್ಷ್ಮೀ ರತನ್ ಶುಕ್ಲಾ ರವಿವಾರ ತಳ್ಳಿಹಾಕಿದ್ದಾರೆ.
ಶಮಿ ಸಂಪೂರ್ಣ ದೈಹಿಕ ಕ್ಷಮತೆ ಹೊಂದಿದ್ದಾರೆ. ಹಿಂದಿನ ಸುತ್ತಿನ ಪಂದ್ಯದಲ್ಲಿ ಹೆಚ್ಚಿನ ಓವರ್ ಗಳನ್ನು ಬೌಲಿಂಗ್ ಮಾಡಿದ್ದರಿಂದ ಅವರು ಈ ಪಂದ್ಯದಿಂದ ಸ್ವತಃ ವಿಶ್ರಾಂತಿ ಕೋರಿದ್ದಾರೆ ಎಂದು ಶುಕ್ಲಾ ತಿಳಿಸಿದರು.
ಆಕಾಶ್ ದೀಪ್ ಮತ್ತು ಮುಕೇಶ್ ಕುಮಾರ್ ‘ಇಂಡಿಯಾ ಎ’ ತಂಡದಲ್ಲಿ ಆಡುತ್ತಿರುವುದರಿಂದ 2026–27ರ ರಣಜಿ ಟ್ರೋಫಿ ಋತುವಿನ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಹಾಗಾಗಿ, ಅವರ ಅನುಪಸ್ಥಿತಿಯಲ್ಲಿ ಶಮಿ ಬಂಗಾಳದ ವೇಗದ ದಾಳಿಯ ನೇತೃತ್ವ ವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹೊಸದಿಲ್ಲಿಯ ಪಾಲಂ ಮೈದಾನದಲ್ಲಿ ನಡೆದ ಈ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ 36 ವರ್ಷದ ಶಮಿ ಸ್ಥಾನ ಪಡೆದಿರಲಿಲ್ಲ.
ಭಾರತ ತಂಡದ ನ್ಯೂಝಿಲ್ಯಾಂಡ್ ಪ್ರವಾಸದ ಎರಡು ಟೆಸ್ಟ್ಗಳ ಸರಣಿಯಿಂದ ಶಮಿಯನ್ನು ಕೈಬಿಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದು ಅವರ ದೈಹಿಕ ಕ್ಷಮತೆಯ ಬಗ್ಗೆ ಹಾಗೂ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಆಯ್ಕೆಯಾಗದ ಹತಾಶೆಯಿಂದಾಗಿ ಅವರು ರಣಜಿ ಪಂದ್ಯದಿಂದ ಹೊರಗುಳಿದರೇ ಎಂಬ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿತ್ತು.
ಆದರೆ, ಶುಕ್ಲಾ ಈ ಊಹಾಪೋಹಗಳನ್ನು ತಳ್ಳಿಹಾಕಿದ್ದು, ಶಮಿ ಅವರ ಕೆಲಸದ ಹೊರೆಯನ್ನು ಕಡಿಮೆಗೊಳಿಸುವ ಏಕೈಕ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.