×
Ad

ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ 5 ವಿಕೆಟ್ ಗೊಂಚಲು ಪಡೆದು ದಾಖಲೆ ನಿರ್ಮಿಸಿದ ಬುಮ್ರಾ

Update: 2025-11-14 20:20 IST

ಜಸ್‌ಪ್ರಿತ್ ಬುಮ್ರಾ | Photo Credit : PTI 


ಕೋಲ್ಕತಾ, ನ.14: ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅತ್ಯಮೋಘ ಬೌಲಿಂಗ್(5-27)ಸಂಘಟಿಸಿ ಈಡನ್‌ ಗಾರ್ಡನ್ಸ್‌ ನಲ್ಲಿ ಶುಕ್ರವಾರ ಆರಂಭವಾದ ಮೊದಲ ಟೆಸ್ಟ್‌ ನ ಮೊದಲ ದಿನದಾಟದಲ್ಲೇ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ತಂಡವು ಕೇವಲ 159 ರನ್‌ ಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ ವಿಕೆಟ್ ನಷ್ಟವಿಲ್ಲದೆ 57 ರನ್ ಕಲೆ ಹಾಕಿ ದೊಡ್ಡ ಮೊತ್ತ ಕಲೆ ಹಾಕುವತ್ತ ಚಿತ್ತಹರಿಸಿತ್ತು. ಆದರೆ ಬುಮ್ರಾ ಅವರು ಇಬ್ಬರೂ ಆರಂಭಿಕ ಆಟಗಾರರನ್ನು ಬೆನ್ನುಬೆನ್ನಿಗೆ ಪೆವಿಲಿಯನ್‌ ಗೆ ಕಳುಹಿಸಿ ಶಾಕ್ ನೀಡಿದರು. ಬುಮ್ರಾ ಹೊಡೆತಕ್ಕೆ ತತ್ತರಿಸಿದ ಪ್ರವಾಸಿ ತಂಡದ ಇನಿಂಗ್ಸ್ ಸಂಪೂರ್ಣ ಹಳಿ ತಪ್ಪಿತು.

ದಕ್ಷಿಣ ಆಫ್ರಿಕಾ ತಂಡವು ಕೇವಲ 102 ರನ್‌ ಗೆ ತನ್ನೆಲ್ಲಾ 10 ವಿಕೆಟ್‌ ಗಳನ್ನು ಕಳೆದುಕೊಂಡಿದ್ದು, ಮಧ್ಯಮ ಸರದಿಯು ಬುಮ್ರಾ ಅವರ ನಿಖರ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉದುರಿಹೋಯಿತು.

ಬುಮ್ರಾ ಅವರು ಟೆಸ್ಟ್ ಕ್ರಿಕೆಟ್‌ ನಲ್ಲಿ 16ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಈ ಮೂಲಕ ಭಾರತದ ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಭಗತ್ ಚಂದ್ರಶೇಖರ್‌ರೊಂದಿಗೆ ಸ್ಥಾನ ಪಡೆದಿದ್ದಾರೆ.

ಭಾರತೀಯ ಬೌಲರ್‌ ಗಳ ಪೈಕಿ ಲೆಜೆಂಡ್‌ಗಳಾದ ಆರ್.ಅಶ್ವಿನ್(37), ಅನಿಲ್ ಕುಂಬ್ಳೆ(35), ಹರ್ಭಜನ್ ಸಿಂಗ್(25) ಹಾಗೂ ಕಪಿಲ್‌ದೇವ್(23)ಅತ್ಯಂತ ಹೆಚ್ಚು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಕೆಲವೇ ಪಂದ್ಯಗಳಲ್ಲಿ ಆಡಿದ್ದರೂ ಬುಮ್ರಾ ಟೆಸ್ಟ್ ಕ್ರಿಕೆಟ್‌ ನಲ್ಲಿ ಕ್ಷಿಪ್ರವಾಗಿ ಬೆಳೆದು ನಿಂತಿದ್ದಾರೆ.

27 ರನ್‌ ಗೆ 5 ವಿಕೆಟ್‌ ಗಳನ್ನು ಕಬಳಿಸಿರುವ ಬುಮ್ರಾ ಅವರು ವಿಭಿನ್ನ ಕಾರಣಕ್ಕೆ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ಕೆತ್ತಿದ್ದಾರೆ. 2019ರ ನಂತರ ಭಾರತ ನೆಲದಲ್ಲಿ ಟೆಸ್ಟ್ ಕ್ರಿಕೆಟಿನ ಮೊದಲ ದಿನದಾಟದಲ್ಲೇ ಐದು ವಿಕೆಟ್ ಗೊಂಚಲು ಪಡೆದ ಭಾರತದ 2ನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. 2019ರಲ್ಲಿ ಇದೇ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಹಗಲು-ರಾತ್ರಿ ಟೆಸ್ಟ್ ಪಂದ್ಯದ ವೇಳೆ ಇಶಾಂತ್ ಶರ್ಮಾ ಐದು ವಿಕೆಟ್‌ ಗಳನ್ನು ಪಡೆದಿದ್ದರು.

2008ರಲ್ಲಿ ಅಹ್ಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಮೊದಲ ದಿನವೇ ಟೆಸ್ಟ್ ಕ್ರಿಕೆಟ್‌ ನಲ್ಲಿ ಐದು ವಿಕೆಟ್ ಪಡೆದ ಕೊನೆಯ ವೇಗದ ಬೌಲರ್ ಆಗಿದ್ದಾರೆ.

ನ್ಯೂಝಿಲ್ಯಾಂಡ್‌ ನ ಮ್ಯಾಟ್ ಹೆನ್ರಿ ಕಳೆದ ವರ್ಷ ಬೆಂಗಳೂರು ಟೆಸ್ಟ್‌ ನ ಮೊದಲ ದಿನದಾಟ ಮಳೆಗಾಹುತಿಯಾದ ನಂತರ ಎರಡನೇ ದಿನದಾಟದಲ್ಲಿ ಐದು ವಿಕೆಟ್ ಗುಚ್ಛ ಪಡೆದಿದ್ದರು.

ಇಂದು ಬುಮ್ರಾಗೆ ಉತ್ತಮ ಸಾಥ್ ನೀಡಿದ ಮುಹಮ್ಮದ್ ಸಿರಾಜ್ ಹಾಗೂ ಕುಲದೀಪ ಯಾದವ್ ತಲಾ ಎರಡು ವಿಕೆಟ್‌ ಗಳನ್ನು ಪಡೆದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News