4,000 ಏಕದಿನ ರನ್‌ಗಳ ಮೈಲಿಗಲ್ಲು ತಲುಪಿದ ಚಾಮರಿ ಅತಪತ್ತು
ಚಾಮರಿ ಅತಪತ್ತು | Photo Credit : @ICC
ಮುಂಬೈ, ಅ. 20: ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಚಾಮರಿ ಅತಪತ್ತು ಸೋಮವಾರ ಏಕದಿನ ಪಂದ್ಯಗಳಲ್ಲಿ 4,000 ರನ್ ಗಳಿಸಿದ ಶ್ರೀಲಂಕಾದ ಏಕೈಕ ಮಹಿಳಾ ಕ್ರಿಕೆಟರ್ ಆದರು. ನವಿ ಮುಂಬೈಯ ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅವರು ಈ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಆರಂಭಿಕ ಆಟಗಾರ್ತಿ ಚಾಮರಿ 43 ಎಸೆತಗಳಲ್ಲಿ 46 ರನ್‌ಗಳನ್ನು ಬಾರಿಸಿದರು. ತಂಡದ ಇನಿಂಗ್ಸ್‌ಗೆ ಉತ್ತಮ ಆರಂಭ ನೀಡಿದ ಅವರನ್ನು ಅಂತಿಮವಾಗಿ ಬಾಂಗ್ಲಾದೇಶದ ರಬಿಯಾ ಖಾನ್ ಪೆವಿಲಿಯನ್‌ಗೆ ಕಳುಹಿಸಿದರು.
ಅರ್ಧ ಶತಕವನ್ನು ಬಾರಿಸಲು ವಿಫಲರಾದರೂ, 35 ವರ್ಷದ ಚಾಮರಿ 4,000 ಏಕದಿನ ರನ್‌ಗಳನ್ನು ಪೂರೈಸುವ ಮೂಲಕ ಮಹತ್ವದ ವೈಯಕ್ತಿಕ ಮೈಲಿಗಲ್ಲೊಂದನ್ನು ಸ್ಥಾಪಿಸಿದರು. ಇತರ ಯಾವುದೇ ಶ್ರೀಲಂಕಾದ ಮಹಿಳಾ ಕ್ರಿಕೆಟರ್ ಅವರ ಸಾಧನೆಯ ಸನಿಹವೂ ತಲುಪಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳನ್ನು ಗಳಿಸಿರುವ ಶ್ರೀಲಂಕಾ ಮಹಿಳಾ ಕ್ರಿಕೆಟಿಗರ ಪಟ್ಟಿಯಲ್ಲಿ 2029ರನ್‌ಗಳನ್ನು ಗಳಿಸಿರುವ ಶಶಿಕಲಾ ಸಿರಿವರ್ದನೆ ಎರಡನೇ ಸ್ಥಾನದಲ್ಲಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಆಡಲು ಇಳಿಯುವ ಮುನ್ನ ಶ್ರೀಲಂಕಾ ನಾಯಕಿ, 4,000 ರನ್‌ಗಳ ಮೈಲಿಗಲ್ಲಿನಿಂದ ಕೇವಲ ಒಂದು ರನ್ ದೂರದಲ್ಲಿದ್ದರು.
ಈಗ ಅವರು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 4,000 ರನ್‌ಗಳನ್ನು ಪೂರೈಸಿದ ನಾಲ್ಕನೇ ಏಶ್ಯನ್ ಮತ್ತು ಜಾಗತಿಕ ಮಟ್ಟದಲ್ಲಿ 20ನೇ ಆಟಗಾರ್ತಿಯಾಗಿದ್ದಾರೆ.