ತಾಯ್ನಾಡಿಗೆ ಮರಳಿದ ಚಾಂಪಿಯನ್ಸ್ ದಕ್ಷಿಣ ಆಫ್ರಿಕಾ, ಸಾವಿರಾರು ಜನರಿಂದ ಭವ್ಯ ಸ್ವಾಗತ
PC : @SportArtsCultur
ಜೋಹಾನ್ಸ್‌ಬರ್ಗ್: ಇತ್ತೀಚೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ಡಬ್ಲ್ಯುಟಿಸಿ)ನೂತನ ಚಾಂಪಿಯನ್ ಆಗಿ ಹೊರಹೊಮ್ಮಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಬುಧವಾರ ಇಂಗ್ಲೆಂಡ್‌ನಿಂದ ಸ್ವದೇಶಕ್ಕೆ ಮರಳಿದ್ದು, ಜೋಹಾನ್ಸ್‌ಬರ್ಗ್‌ನ ಪ್ರಧಾನ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು.
ನಾಯಕ ಟೆಂಬಾ ಬವುಮಾ ಹಾಗೂ ಮುಖ್ಯ ಕೋಚ್ ಶುಕ್ರಿ ಕೊನ್ರಾಡ್ ಅವರಿಗೆ ಸಂಭ್ರಮದಲ್ಲಿ ಮುಳುಗಿದ್ದ ಕ್ರಿಕೆಟ್ ಅಭಿಮಾನಿಗಳು ಮೊದಲಿಗೆ ಸ್ವಾಗತಿಸಿದರು. ಈ ಇಬ್ಬರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ತಂಡಕ್ಕೆ ನೀಡುವ ಮಿರುಗುವ ಡಬ್ಲ್ಯುಟಿಸಿ ಗದೆಯೊಂದಿಗೆ ಆಗಮಿಸಿದರು.
ಲಾರ್ಡ್ಸ್‌ನಲ್ಲಿ ಕಳೆದ ಶನಿವಾರ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿರುವ ದಕ್ಷಿಣ ಆಫ್ರಿಕಾ ತಂಡ 27 ವರ್ಷಗಳ ನಂತರ ಪ್ರಮುಖ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಬವುಮಾ ಹಾಗೂ ಕೊನ್ರಾಡ್ ಮೊದಲಿಗೆ ಆಗಮಿಸಿದ್ದು, ಆ ನಂತರ ತಂಡದ ಉಳಿದ ಆಟಗಾರರು ಆಗಮಿಸಿದರು. ಪ್ರತಿಯೊಬ್ಬ ಆಟಗಾರನು, ಅಭಿಮಾನಿಗಳು ನೀಡಿದ ಪುಷ್ಪಗುಚ್ಛವನ್ನು ಸ್ವೀಕರಿಸಿ ಅವರ ಕೈ ಕುಲುಕುತ್ತಾ, ಆಟೋಗ್ರಾಫ್‌ಗಳಿಗೆ ಸಹಿ ಹಾಕುತ್ತಾ, ಆಲಿಂಗಿಸುತ್ತಿರುವುದು ಕಂಡು ಬಂತು.
1998ರ ನಾಕೌಟ್ ಟ್ರೋಫಿಯ ನಂತರ ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಐಸಿಸಿ ಟ್ರೋಫಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಯುವಕರಿಂದ ಹಿಡಿದು ವೃದ್ದರ ತನಕ ಕ್ರಿಕೆಟ್ ಅಭಿಮಾನಿಗಳು ಹೂಗುಚ್ಛಗಳು, ಧ್ವಜಗಳನ್ನು ಕೈಯಲ್ಲಿ ಹಿಡಿದು ಘೋಷಣೆಗಳನ್ನು ಕೂಗಿದರು.
ಟೆಂಬಾ ಬವುಮಾರ ದಕ್ಷ ನಾಯಕತ್ವ, ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ನಂತರ 2ನೇ ಇನಿಂಗ್ಸ್‌ನಲ್ಲಿ 136 ರನ್ ಗಳಿಸಿದ್ದ ಆರಂಭಿಕ ಬ್ಯಾಟರ್ ಏಡೆನ್ ಮಾರ್ಕ್ರಮ್ ಹಾಗೂ ವೇಗದ ಬೌಲರ್ ಕಾಗಿಸೊ ರಬಾಡ ಅವರ 9 ವಿಕೆಟ್‌ಗಳ ಗೊಂಚಲು ದಕ್ಷಿಣ ಆಫ್ರಿಕಾದ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣವಾಗಿದ್ದವು.
ದಕ್ಷಿಣ ಆಫ್ರಿಕಾ ತಂಡವು ಜೂನ್ 28ರಿಂದ ಬುಲಾವಯೊದಲ್ಲಿ ಝಿಂಬಾಬ್ವೆ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಬವುಮಾ ಅವರು ತಂಡವನ್ನು ಮತ್ತೊಮ್ಮೆ ಮುನ್ನಡೆಸಲಿದ್ದಾರೆ. ಮಾರ್ಕ್ರಮ್ ಹಾಗೂ ರಬಾಡ ವಿಶ್ರಾಂತಿ ಪಡೆಯಲಿದ್ದಾರೆ.