ಸಿನ್ಸಿನಾಟಿ ಓಪನ್-2025: ಹಾಲಿ ಚಾಂಪಿಯನ್ಸ್ ಸಬಲೆಂಕಾ, ಸಿನ್ನರ್ ಮೂರನೇ ಸುತ್ತಿಗೆ ಲಗ್ಗೆ
ಜನ್ನಿಕ್ ಸಿನ್ನರ್ - Photo : x
ಸಿನ್ಸಿನಾಟಿ, ಆ.10: ಹಾಲಿ ಚಾಂಪಿಯನ್‌ಗಳಾದ ಆರ್ಯನಾ ಸಬಲೆಂಕಾ ಹಗೂ ಜನ್ನಿಕ್ ಸಿನ್ನರ್ ಅವರು ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ವಿಶ್ವದ ನಂ.1 ಆಟಗಾರ್ತಿ ಸಬಲೆಂಕಾ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಝೆಕ್ಸ್ ಮಾರ್ಕೆಟಾ ವೊಂಡ್ರೌಸೋವಾರನ್ನು 7-5, 6-1 ಸೆಟ್‌ಗಳಿಂದ ಮಣಿಸಿದರು.
ಇಟಲಿಯ ಆಟಗಾರ ಸಿನ್ನರ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೊಲಂಬಿಯಾದ ಕ್ವಾಲಿಫೈಯರ್ ಡೇನಿಯಲ್ ಗಾಲನ್ರನ್ನು 6-1, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
ವಿಂಬಲ್ಡನ್ ಚಾಂಪಿಯನ್ಶಿಪ್ ಗೆದ್ದ ನಂತರ ವಿರಾಮ ಪಡೆದಿದ್ದ ಸಿನ್ನರ್ ಅವರು ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಕೇವಲ 4 ಬಾರಿ ಅನಗತ್ಯ ತಪ್ಪೆಸಗಿದ ಸಿನ್ನರ್ 50 ನಿಮಿಷಗಳಲ್ಲಿ ಗಾಲನ್ರನ್ನು ಸೋಲಿಸಿದರು. 4ನೇ ಸುತ್ತಿನ ಪಂದ್ಯದಲ್ಲಿ ಕೆನಡಾದ ಗ್ಯಾಬ್ರಿಯೆಲ್ ಡಿಯಾಲೊರನ್ನು ಎದುರಿಸಲಿದ್ದಾರೆ.
ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸಬಲೆಂಕಾ ಅವರು ವಿಂಬಲ್ಡನ್ ಚಾಂಪಿಯನ್ಶಿಪ್‌ನಲ್ಲಿ ಸೆಮಿ ಫೈನಲ್ ಹಂತದಲ್ಲಿ ಸೋತ ನಂತರ ಯಾವುದೇ ಪಂದ್ಯವನ್ನು ಆಡಿರಲಿಲ್ಲ. ಮುಂದಿನ ಸುತ್ತಿನಲ್ಲಿ ಎಮ್ಮಾ ರಾಡುಕಾನು ಅವರನ್ನು ಎದುರಿಸಲಿದ್ದಾರೆ.
‘‘ನಾನು ಈ ವರ್ಷ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಇಂತಹ ಪ್ರಮುಖ ಕ್ಷಣಗಳನ್ನು ನಿಭಾಯಿಸಿದ ಅನುಭವ ನನಗಿದೆ. ನನ್ನ ನಿರ್ಧಾರದ ಬಗ್ಗೆ ಅನುಮಾನವಿಲ್ಲದೆ ಆಡುವುದು ನನಗೆ ಮುಖ್ಯವಾಗಿದೆ. ಈ ತನಕ ಎಲ್ಲವೂ ಉತ್ತಮವಾಗಿ ನಡೆದಿದೆ’’ ಎಂದು ಸಬಲೆಂಕಾ ಹೇಳಿದ್ದಾರೆ.
ತನ್ನ ಹೊಸ ಕೋಚ್ ಫ್ರಾನ್ಸಿಸ್ಕೋ ಅವರ ಮಾರ್ಗದರ್ಶನದಲ್ಲಿ ಆಡಿದ ಎಮ್ಮಾ ರಾಡುಕಾನು ಮತ್ತೊಂದು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸರ್ಬಿಯದ ಓಲ್ಗಾ ಡ್ಯಾನಿಲೋವಿಕ್ರನ್ನು 6-3, 6-2 ಅಂತರದಿಂದ ಮಣಿಸಿದ್ದಾರೆ.
ಕೆನಡಿಯನ್ ಓಪನ್ ಟೂರ್ನಿಯಲ್ಲಿ ಬೇಗನೆ ನಿರ್ಗಮಿಸಿದ್ದ ಪೋಲ್ಯಾಂಡ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರು ಅನಸ್ತೇಸಿಯಾ ಪೊಟಾಪೊವಾರನ್ನು 6-1,6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
3ನೇ ಶ್ರೇಯಾಂಕಿತೆ ಸ್ವಿಯಾಟೆಕ್ ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಮಾರ್ಟಾ ಕೊಸ್ಟ್ಯುಕ್ರನ್ನು ಎದುರಿಸಲಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ವಿಜೇತೆ ಮ್ಯಾಡಿಸನ್ ಕೀಸ್ ಜರ್ಮನಿಯ ಇವಾ ಲೀಸ್ರನ್ನು 1-6, 6-3, 7-6(1) ಸೆಟ್‌ಗಳಿಂದ ಮಣಿಸಿ ಮೂರನೇ ಸುತ್ತು ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ಜಪಾನಿನ ಅಯೋಯ್ ಇಟೊ ಸವಾಲನ್ನು ಎದುರಿಸಲಿದ್ದಾರೆ.
ಇದಕ್ಕೂ ಮೊದಲು ನಡೆದ ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಫ್ರಾನ್ಸ್‌ನ ಅರ್ಥರ್ ರಿಂಡರ್ಕ್ನೆಚ್ ನಾರ್ವೆಯ 11ನೇ ಶ್ರೇಯಾಂಕದ ಆಟಗಾರ ಕಾಸ್ಪರ್ ರೂಡ್ರನ್ನು 6-7(5), 6-4, 6-2 ಸೆಟ್‌ಗಳ ಅಂತರದಿಂದ ಸದೆಬಡಿದರು.
ಇಟಲಿಯ 8ನೇ ಶ್ರೇಯಾಂಕದ ಲೊರೆಂರೊ ಮುಸೆಟ್ಟಿ ಫ್ರಾನ್ಸ್‌ನ ಬೆಂಜಮಿನ್ ಬೊಂಝಿ ಅವರನ್ನು 5-7, 6-4, 7-6(4) ಸೆಟ್‌ಗಳ ಅಂತರದಿಂದ ಮಣಿಸಿದರು.
ಅಮೆರಿಕದ 4ನೇ ಶ್ರೇಯಾಂಕದ ಆಟಗಾರ ಟೇಲರ್ ಫ್ರಿಟ್ಝ್ ಅವರು ತಮ್ಮದೇ ದೇಶದ ಎಮಿಲಿಯೊ ನಾವಾರನ್ನು 6-4, 6-4 ನೇರ ಸೆಟ್‌ಗ ಳಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಇಟಲಿಯ ಲೊರೆಂರೊ ಸೊನೆಗೊರನ್ನು ಎದುರಿಸಲು ಸಜ್ಜಾಗಿದ್ದಾರೆ.