×
Ad

ಬೆಂಗಳೂರಿನಲ್ಲಿ ನಾಳೆ ಆಸಿಸ್-ಪಾಕ್ ಪೈಪೋಟಿ

Update: 2023-10-19 23:11 IST

ಬೆಂಗಳೂರು: ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಶುಕ್ರವಾರ ಬೆಂಗಳೂರಿನ ಚಿನ್ನಾಸ್ವಾಮಿ ಸ್ಟೇಡಿಯಂಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯ ತಂಡಗಳು ಮುಖಾಮುಖಿಯಾಗಲಿವೆ.

ಈ ಎರಡು ತಂಡಗಳು ಈ ವಿಶ್ವಕಪ್ ನಲ್ಲಿ ಈವರೆಗೆ ತಮ್ಮ ಪ್ರತಿಷ್ಠೆಗೆ ತಕ್ಕ ಪ್ರದರ್ಶನವನ್ನು ನೀಡಿಲ್ಲ. ಅವುಗಳು ಇನ್ನಷ್ಟೇ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್‌ ಗೆ ಹೊಸ ಚೈತನ್ಯ ತುಂಬ ಬೇಕಾಗಿದೆ.

ಒತ್ತಡದಲ್ಲಿ ನಿರ್ಭೀತ ಕ್ರಿಕೆಟ್ ಆಡುವುದು ಪಾಕಿಸ್ತಾನದ ಶಕ್ತಿ. 1992ರ ವಿಶ್ವಕಪ್ ನಲ್ಲಿ ಆ ತಂಡವು ಇದನ್ನು ಸಾಬೀತುಪಡಿಸಿತ್ತು ಮತ್ತು ಆ ವರ್ಷ ಪ್ರಶಸ್ತಿ ಜಯಿಸಿತ್ತು. ಆದರೆ, ಈ ವಿಶ್ವಕಪ್ ನಲ್ಲಿ ಅದು ನೈಜ ಒತ್ತಡದ ಮೊದಲ ಸೂಚನೆ ಸಿಗುತ್ತಲೇ ಕುಸಿಯಲು ಆರಂಭಿಸಿತು. ತನ್ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಅದಕ್ಕೆ ನೈಜ ಪ್ರದರ್ಶನವನ್ನು ನೀಡಲು ಸಾಧ್ಯವಾಗಲಿಲ್ಲ. ಅದು ಭಾರತದ ವಿರುದ್ಧ ಏಳು ವಿಕೆಟ್ ಗಳ ಸೋಲನುಭವಿಸಿತು. ಆ ಪಂದ್ಯದಲ್ಲಿ ಅದು ಯಾವ ಹಂತದಲ್ಲೂ ಹೋರಾಟವನ್ನು ನೀಡಲಿಲ್ಲ.

ಹೈದರಾಬಾದ್ ನಲ್ಲಿ ನಡೆದ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಗೆಲುವು ಸಾಧಿಸಿತು. 345 ರನ್ ಗಳ ಅಗಾಧ ಗುರಿಯನ್ನು ಅದು ಯಶಸ್ವಿಯಾಗಿ ಬೆನ್ನತ್ತಿತು. ಆದರೆ, ಅದು ಗುಣಮಟ್ಟ ಕಳೆದುಕೊಂಡಿರುವ ಶ್ರೀಲಂಕಾ ತಂಡದ ವಿರುದ್ಧವಾಗಿತ್ತು.

ಶುಕ್ರವಾರ, ಪಾಕಿಸ್ತಾನದ ಮೇಲೆ ಆಸ್ಟ್ರೇಲಿಯವು ಒತ್ತಡ ಹೇರಲಿದೆ. ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯವು ಭಾರತದ ಮಟ್ಟಕ್ಕೆ ಬೆಳೆಯಲಾರದು. ಆದರೆ, ಅದು ತಳ್ಳಿಹಾಕುವಂಥ ಪ್ರತಿಸ್ಪರ್ಧಿಯೇನೂ ಅಲ್ಲ. ಇದು ಪಾಕಿಸ್ತಾನಕ್ಕೆ ಚೆನ್ನಾಗಿ ಗೊತ್ತಿದೆ. ಯಾಕೆಂದರೆ, ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯದ ಯಶಸ್ಸು 69-34 ಆಗಿದೆ. 50 ಓವರ್ ಗಳ ವಿಶ್ವಕಪ್ ಗಳಲ್ಲಿಯೂ ಆಸ್ಟ್ರೇಲಿಯ 6-4ರ ಮುನ್ನಡೆಯನ್ನು ಹೊಂದಿದೆ.

ಪರಿಸ್ಥಿತಿಯನ್ನು ಸುಧಾರಿಸಲು ಪಾಕಿಸ್ತಾನವು ತನ್ನ ಹಿಂಜರಿಕೆಯಿಲ್ಲದೇ ಕಣಕ್ಕಿಳಿಯಬೇಕು. ಇದು ಅಗ್ರ ಕ್ರಮಾಂಕದಿಂದಲೇ ಆರಂಭವಾಗಬೇಕು. ಆರಂಭಿಕ ಇಮಾಮುಲ್ ಹಕ್ ಮೂರು ಪಂದ್ಯಗಳಲ್ಲಿ ಕೇವಲ 63 ರನ್ ಗಳಿಸಿದ್ದಾರೆ. ಅವರು ಇನ್ನೋರ್ವ ಆರಂಭಿಕ ಅಬ್ದುಲ್ಲಾ ಶಫೀಕ್ ಗೆ ಹೆಚ್ಚಿನ ಬೆಂಬಲವನ್ನು ಕೊಡಬೇಕಾಗಿದೆ.

ನಾಯಕ ಬಾಬರ್ ಅಝಮ್ ಫಾರ್ಮ್ ನಲ್ಲಿ ಆಗುವ ಏರುಪೇರು ತಂಡದ ಇನ್ನೊಂದು ಸಮಸ್ಯೆಯಾಗಿದೆ. ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಬಾಬರ್ ಅಝಮ್ ಭಾರತದ ವಿರುದ್ಧ 50 ರನ್ ಗಳನ್ನು ಗಳಿಸಿದ್ದಾರೆ. ಆದರೆ ಅದಕ್ಕಿಂತ ಮೊದಲು ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧದ ಅವರ ನಿರ್ವಹಣೆ ಕಳಪೆಯಾಗಿತ್ತು. ಈ ಇಬ್ಬರೂ ಬ್ಯಾಟರ್ ಗಳು ಆಸ್ಟ್ರೇಲಿಯ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಬೇಕಾಗಿದೆ.

ಗಾಯಾಳು ವೇಗಿ ನಸೀಮ್ ಶಾ ಅನುಪಸ್ಥಿತಿಯಲ್ಲಿ, ಪಾಕಿಸ್ತಾನವು ಶಹೀನ್ ಶಾ ಅಫ್ರಿದಿಯನ್ನು ಸಂಪೂರ್ಣವಾಗಿ ಅವಲಂಬಿಸಿದೆ. ಆದರೆ, ಈ ಪಂದ್ಯಾವಳಿಯಲ್ಲಿ ಅವರು ತನ್ನ ಶ್ರೇಷ್ಠ ಪ್ರದರ್ಶನದ ಸನಿಹಕ್ಕೂ ಸುಳಿದಿಲ್ಲ.

ಇನ್ನೊಂದೆಡೆ, ಆಸ್ಟ್ರೇಲಿಯವೂ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಭಾರತ ಮತ್ತು ದಕ್ಷಿಣ ಆಫಿಕ ವಿರುದ್ಧ ಅನುಭವಿಸಿದ ಸೋಲುಗಳು ಅದಕ್ಕೆ ಆಘಾತಕಾರಿಯಾಗಿ ಪರಿಣಮಿಸಿವೆ. ಇನ್ನೊಂದು ಸೋಲು ಅದರ ಸೆಮಿಫೈನಲ್ ನಿರೀಕ್ಷೆಯನ್ನೇ ಬುಡಮೇಲುಗೊಳಿಸಬಹುದು. ಶ್ರೀಲಂಕಾ ವಿರುದ್ಧ ಅದು ಸಂಪಾದಿಸಿರುವ ವಿಜಯವು ಒಂದು ಸಣ್ಣ ಹೆಜ್ಜೆಯಷ್ಟೇ ಆಗಿದೆ. ಅದನ್ನು ಬಳಸಿಕೊಂಡು ಅದು ನಾಕೌಟ್ ಹಂತಕ್ಕೆ ದಾಪುಗಾಲಿಡಬೇಕಾಗಿದೆ.

ಆಸ್ಟ್ರೇಲಿಯದ ಈ ಪರಿಸ್ಥಿತಿಗೆ ಮುಖ್ಯ ಕಾರಣ ಬ್ಯಾಟರ್ ಗಳು. ಜೋಶ್ ಇಂಗ್ಲಿಸ್ ರನ್ನು ಹೊರತುಪಡಿಸಿ ಇತರ ಯಾವುದೇ ಬ್ಯಾಟರ್ ಈ ಪಂದ್ಯಾವಳಿಯಲ್ಲಿ ಅರ್ಧ ಶತಕವನ್ನು ಬಾರಿಸಿಲ್ಲ. ಒಟ್ಟು ರನ್ ಗಳ ಸಂಖ್ಯೆ ನೂರನ್ನು ದಾಟಿದ ಆಸ್ಟ್ರೇಲಿಯದ ಏಕೈಕ ಬ್ಯಾಟರ್ ಮಾರ್ನಸ್ ಲಾಬುಶಾನ್. ಮೂರು ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 49, ಸ್ಟೀವ್ ಸ್ಮಿತ್ 65, ಡೇವಿಡ್ ವಾರ್ನರ್ 65 ಮತ್ತು ಮಿಚೆಲ್ ಮಾರ್ಶ್ 59 ರನ್ ಗಳನ್ನಷ್ಟೇ ಗಳಿಸಿದ್ದಾರೆ. ಇದು ಆಸ್ಟ್ರೇಲಿಯ ಬ್ಯಾಟಿಂಗ್ ಸರದಿಯ ದೌರ್ಬಲ್ಯವನ್ನು ತೋರಿಸುತ್ತದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದರ ಬ್ಯಾಟಿಂಗ್ ಸುಧಾರಣೆಯಾಗಬೇಕಾಗಿದೆ.

ಬೌಲರ್ ಗಳಲ್ಲಿ ಮಿಚೆಲ್ ಸ್ಟಾರ್ಕ್, ಆ್ಯಡಮ್ ಝಾಂಪ ಮತ್ತು ಜೋಶ್ ಹೇಝಲ್ ವುಡ್ ಬೌಲಿಂಗ್ ನಲ್ಲಿ ತೀಕ್ಷ್ಣತೆ ಕಾಯ್ದುಕೊಳ್ಳಲು ಪ್ರಯತ್ನಿಸಿದರೆ, ನಾಯಕ ಪ್ಯಾಟ್ ಕಮಿನ್ಸ್ ಪರಿಣಾಮ ಬೀರುವಲ್ಲಿ ವಿಫಲರಾಗಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News