ಫಿಡೆ ರೇಟಿಂಗ್ಸ್: ಡಿ.ಗುಕೇಶ್ ಜೀವನಶ್ರೇಷ್ಠ ಸಾಧನೆ
ಡಿ.ಗುಕೇಶ್ | PC : PTI
ಹೊಸದಿಲ್ಲಿ: 2025ರ ಮಾರ್ಚ್‌ನಲ್ಲಿ ಬಿಡುಗಡೆಯಾದ ಹೊಸ ಫಿಡೆ ರೇಟಿಂಗ್ಸ್‌ನಲ್ಲಿ ವಿಶ್ವ ಚೆಸ್‌ನಲ್ಲಿ ಮಹತ್ವದ ಸ್ಥಾನ ಪಲ್ಲಟವಾಗಿದ್ದು, ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ದೊಮ್ಮರಾಜು ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದರು.
2025ರ ಆವೃತ್ತಿಯ ಟಾಟಾ ಸ್ಟೀಲ್ ಚೆಸ್ ಮಾಸ್ಟರ್ಸ್‌ನಲ್ಲಿ ರನ್ನರ್ಸ್ ಅಪ್ ಪದಕ ಜಯಿಸಿ ಅತ್ಯುತ್ತಮ ಪ್ರದರ್ಶನ ನೀಡಿರುವ ಗುಕೇಶ್ ಅವರು ಗ್ರ್ಯಾಂಡ್‌ಮಾಸ್ಟರ್‌ಗಳಾದ ಫ್ಯಾಬಿಯಾನೊ ಕರುಯಾನಾ ಹಾಗೂ ಅರ್ಜುನ್ ಎರಿಗೈಸಿ ಅವರನ್ನು ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಇದೇ ವೇಳೆ, ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ರಮೇಶ್ ಬಾಬು ಅವರು ಗುಕೇಶ್ ವಿರುದ್ಧ ಟೈ-ಬ್ರೇಕರ್‌ನಲ್ಲಿ ಟಾಟಾ ಸ್ಟೀಲ್ ಮಾಸ್ಟರ್ಸ್ ಪ್ರಶಸ್ತಿಯನ್ನು ಜಯಿಸಿದ ಹಿನ್ನೆಲೆಯಲ್ಲಿ ಟಾಪ್-10ಕ್ಕೆ ಮರಳಿದ್ದಾರೆ.
ವಿಶ್ವದ ನಂ.1 ಆಟಗಾರನಾಗಿ ಜಿಎಂ ಮ್ಯಾಗ್ನಸ್ ಕಾರ್ಲ್‌ಸನ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಫ್ಯಾಬಿಯಾನೊ ಟಾಟಾ ಸ್ಟೀಲ್ ಟೂರ್ನಿಯಲ್ಲಿ ಪರದಾಟ ನಡೆಸಿದ್ದರ ಲಾಭ ಪಡೆದಿರುವ ಜಿಎಂ ಹಿಕಾರು ನಕಮುರ ದ್ವಿತೀಯ ಸ್ಥಾನಕ್ಕೇರಿದ್ದಾರೆ.
ವಿಶ್ವ ಚಾಂಪಿಯನ್‌ಪಟ್ಟಕ್ಕೇರಿದ ನಂತರ ಮೊದಲ ಪ್ರಮುಖ ಟೂರ್ನಿಯಲ್ಲಿ ಆಡಿದ ಗುಕೇಶ್ ಕೊನೆಯ ಸುತ್ತಿನಲ್ಲಿ ಸೋಲನುಭವಿಸಿ ಟಾಟಾ ಸ್ಟೀಲ್ ಟ್ರೋಫಿ ಗೆಲ್ಲುವುದರಿಂದ ವಂಚಿತರಾದರು.
ಆದರೆ ಟೂರ್ನಿಯಲ್ಲಿ ನೀಡಿರುವ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿರುವ ಗುಕೇಶ್ ಇದೀಗ ವಿಶ್ವದ ನಂ.1 ಆಟಗಾರನಾಗುವತ್ತ ಚಿತ್ತಹರಿಸಿದ್ದಾರೆ.
ಟಾಟಾ ಸ್ಟೀಲ್ ಟ್ರೋಫಿ ಜಯಿಸಿ 17 ರೇಟಿಂಗ್ ಪಾಯಿಂಟ್ಸ್ ಗಳಿಸಿರುವ ಪ್ರಜ್ಞಾನಂದ ವಿಶ್ವದ ನಂ.8ನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಪ್ರಜ್ಞಾನಂದ ಅವರು 2006ರ ನಂತರ ಟಾಟಾ ಸ್ಟೀಲ್ ಟ್ರೋಫಿ ಗೆದ್ದಿರುವ ಭಾರತದ ಮೊದಲ ಚೆಸ್ ತಾರೆ ಎನಿಸಿಕೊಂಡಿದ್ದರು. ಜಿಎಂ ವಿಶ್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು.