ಡೇವಿಡ್ ಮಿಲ್ಲರ್ಗೆ ಗಾಯ, ಎರಡು ವಾರ ಅಲಭ್ಯ
ಡೇವಿಡ್ ಮಿಲ್ಲರ್ | Photo : PTI
ಹೊಸದಿಲ್ಲಿ : ಗುಜರಾತ್ ಟೈಟಾನ್ಸ್ ತಂಡವು ಎರಡು ವಾರಗಳ ಕಾಲ ಡೇವಿಡ್ ಮಿಲ್ಲರ್ ಸೇವೆಯಿಂದ ವಂಚಿತವಾಗಲಿದೆ ಎಂದು ಗುಜರಾತ್ ಟೈಟಾನ್ಸ್ ಆಟಗಾರ ಕೇನ್ ವಿಲಿಯಮ್ಸನ್ ತಿಳಿಸಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದ ವೇಳೆ ವಿಲಿಯಮ್ಸನ್ ಈ ಸಂಗತಿಯನ್ನು ಬಹಿರಂಗಪಡಿಸಿದರು.
ದಕ್ಷಿಣ ಆಫ್ರಿಕಾದ ಬ್ಯಾಟರ್ ಬದಲಿಗೆ ಆಡಿದ ಕಿವೀಸ್ ಬ್ಯಾಟರ್ ವಿಲಿಯಮ್ಸನ್, ನಾವು ಒಂದು ಇಲ್ಲವೇ ಎರಡು ವಾರ ಕಾಲ ಮಿಲ್ಲರ್ ಸೇವೆಯಿಂದ ವಂಚಿತರಾಗಲಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮಿಲ್ಲರ್ಗೆ ಯಾವ ರೀತಿಯ ಗಾಯವಾಗಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಅಧಿಕೃತ ಖಚಿತತೆಗಾಗಿ ಕಾಯಲಾಗುತ್ತಿದೆ. ಮಿಲ್ಲರ್ ಅವರು ಪ್ರಸಕ್ತ ಋತುವಿನಲ್ಲಿ ಗುಜರಾತ್ ಪರ ಮೂರು ಇನಿಂಗ್ಸ್ ಗಳಲ್ಲಿ ಕೇವಲ 77 ರನ್ ಗಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ ಕೂಡ ಗುಜರಾತ್ ವಿರುದ್ದದ ಪಂದ್ಯದಲ್ಲಿ ಗಾಯದ ಸಮಸ್ಯೆಯನ್ನು ಎದುರಿಸಿದ್ದು, ಲಿಯಾಮ್ ಲಿವಿಂಗ್ಸ್ಟೋನ್ ಬದಲಿಗೆ ಝಿಂಬಾಬ್ವೆಯ ಸಿಕಂದರ್ ರಝಾ ಆಡುವ ಅವಕಾಶ ಪಡೆದಿದ್ದರು.