×
Ad

100ನೇ ಎಟಿಪಿ ಸಿಂಗಲ್ಸ್ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ ಜೋಕೋವಿಕ್

Update: 2025-05-25 14:21 IST

ನೊವಾಕ್ ಜೊಕೊವಿಕ್ (Photo credit: X/ @usopen)

ಜಿನಿವಾ: ಜಿನಿವಾ ಓಪನ್ ಟೆನಿಸ್ ಫೈನಲ್ ಪಂದ್ಯದಲ್ಲಿ ಹೂಬರ್ಟ್ ಹುರ್ಕಾಕ್ಝ್ ಅವರನ್ನು 5-7, 6-6 (7-2) ಹಾಗೂ 7-6 (7-2) ಸೆಟ್ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಖ್ಯಾತ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ತಮ್ಮ ನೂರನೆಯ ಎಟಿಪಿ ಪ್ರಶಸ್ತಿಗೆ ಮುತ್ತಿಟ್ಟಿದ್ದು, ಆ ಮೂಲಕ 100 ಎಟಿಪಿ ಪ್ರಶಸ್ತಿಗಳನ್ನು ಜಯಿಸಿದ ಮೂರನೆಯ ಟೆನಿಸ್ ಪಟು ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.

ಈ ಹಿಂದೆ 100 ಎಟಿಪಿ ಪ್ರಶಸ್ತಿಗಳನ್ನು ಜಯಿಸಿದ ಸಾಧನೆ ಮಾಡಿದ್ದ ಜಿಮ್ಮಿ ಕಾನರ್ಸ್ ಹಾಗೂ ರೋಜರ್ ಫೆಡರರ್ ರ ಸಾಲಿಗೆ ಇದೀಗ 24 ಬಾರಿಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತರಾದ ನೊವೊಕ್ ಜೊಕೊವಿಕ್ ಕೂಡಾ ಸೇರ್ಪಡೆಯಾಗಿದ್ದಾರೆ.

ಪಂದ್ಯ ಮುಕ್ತಾಯಗೊಂಡ ನಂತರ, ಟೆನಿಸ್ ಅಂಕಣದಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ನೊವೊಕ್ ಜೊಕೊವಿಕ್, “ಶಾಲಾ ವಿರಾಮದ ವೇಳೆಯಲ್ಲಿ ಮಾತ್ರ ಮೂರು ದಿನ ಹಾಗೂ ಶಾಲೆಗೆ ಒಂದು ದಿನ ರಜೆ ಹಾಕಿ ನನ್ನೊಂದಿಗೆ ಇರಲು ಬಂದಿದ್ದ ನನ್ನ ಪತ್ನಿ ಹಾಗೂ ನನ್ನ ಮಕ್ಕಳಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

“ನನ್ನ ಒಳ್ಳೆಯ ದಿನಗಳು ಹಾಗೂ ಕೆಟ್ಟ ದಿನಗಳೆರಡರಲ್ಲೂ ನನ್ನೊಂದಿಗಿದ್ದಿದ್ದಕ್ಕೆ ನನ್ನ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಎಂಟು ತಿಂಗಳ ಹಿಂದೆ ಪ್ಯಾರಿಸ್ ನಲ್ಲಿ ನಡೆದಿದ್ದ 2024ರ ಒಲಿಂಪಿಕ್ಸ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ತಮ್ಮ 99ನೇ ಎಟಿಪಿ ಪ್ರಶಸ್ತಿ ಗೆದ್ದ ನಂತರ, ನೊವೊಕ್ ಜೊಕೊವಿಕ್ ತಮ್ಮ ಫಾರ್ಮ್ ಕಾಯ್ದುಕೊಳ್ಳಲು ತುಂಬಾ ಸಮಸ್ಯೆ ಅನುಭವಿಸಿದ್ದರು. ನಿರ್ದಿಷ್ಟವಾಗಿ ಮಣ್ಣಿನ ಅಂಕಣಗಳಲ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡಿದ್ದ ಅವರು, ಇತ್ತೀಚೆಗೆ ನಡೆದಿದ್ದ ಮಾಂಟೆ ಕಾರ್ಲೊ ಮಾಸ್ಟರ್ಸ್ ಹಾಗೂ ಮ್ಯಾಡ್ರಿಡ್ ಓಪನ್ ಟೆನಿಸ್ ಕ್ರೀಡಾಕೂಟಗಳಲ್ಲಿ ತಮ್ಮ ಮೊದಲ ಪಂದ್ಯದಲ್ಲೇ ನಿರ್ಗಮಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News