×
Ad

2025ರಲ್ಲಿ 25ನೇ ಗ್ರ್ಯಾನ್‌ಸ್ಲಾಮ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಜೊಕೊವಿಕ್

Update: 2024-12-25 22:01 IST

ನೊವಾಕ್ ಜೊಕೊವಿಕ್‌ | PTI

ಹೊಸದಿಲ್ಲಿ: ಅಭೂತಪೂರ್ವ 25ನೇ ಗ್ರ್ಯಾನ್‌ಸ್ಲಾಮ್ ಟ್ರೋಫಿ ಜಯಿಸಿ ಮಾರ್ಗರೆಟ್ ಕೋರ್ಟ್(24)ಅವರ ದಾಖಲೆಯನ್ನು ಮುರಿಯಲು ಸರ್ಬಿಯದ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಕ್‌ಗೆ ಇನ್ನೊಂದು ಟ್ರೋಫಿ ಗೆಲ್ಲಬೇಕಾಗಿದೆ. ಟೆನಿಸ್ ದಂತಕತೆ ಜೊಕೊವಿಕ್ ಜನವರಿಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿಯೇ ಈ ಸಾಧನೆ ಮಾಡುವ ಆಶಾವಾದದಲ್ಲಿದ್ದಾರೆ.

ಈ ವಾರ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಆಡುವ ಮೂಲಕ ಜೊಕೊವಿಕ್ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಿದ್ದಾರೆ. ಈ ಟೂರ್ನಿಯಲ್ಲಿ ವಿಶ್ವದ ನಂ.1 ಆಟಗಾರ್ತಿ ಅರ್ಯನಾ ಸಬಲೆಂಕಾ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಈ ವರ್ಷ ರಫೆಲ್ ನಡಾಲ್, ಆ್ಯಂಡಿ ಮರ್ರೆ ನಿವೃತ್ತಿಯಾಗಿದ್ದರೆ, ರೋಜರ್ ಫೆಡರರ್ 2022ರಲ್ಲಿ ತನ್ನ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ಹೀಗಾಗಿ 37ರ ಹರೆಯದ ಜೊಕೊವಿಕ್ ತನ್ನ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಸಾಂಪ್ರದಾಯಿಕ ನಾಲ್ವರು ಎದುರಾಳಿಗಳಿಲ್ಲದ ಟೆನಿಸ್ ಟೂರ್ನಿಗಳಲ್ಲಿ ಆಡಲಿದ್ದಾರೆ.

ಜನವರಿ 12ರಿಂದ ಆರಂಭವಾಗಲಿರುವ ವರ್ಷದ ಮೊದಲ ಪ್ರಮುಖ ಚಾಂಪಿಯನ್‌ಶಿಪ್ ಆಸ್ಟ್ರೇಲಿಯನ್ ಓಪನ್‌ಗಿಂತ ಮೊದಲು ಪೂರ್ವ ತಯಾರಿ ಟೂರ್ನಿಗಳಿಂದ ಹೊರಗುಳಿಯಲು ಯುವ ಆಟಗಾರರಾದ ಕಾರ್ಲೊಸ್ ಅಲ್ಕರಾಝ್ ಹಾಗೂ ಜನ್ನಿಕ್ ಸಿನ್ನರ್ ನಿರ್ಧರಿಸಿದ್ದಾರೆ. ಈ ಇಬ್ಬರು ಈ ವರ್ಷ ತಲಾ 2 ಗ್ರ್ಯಾನ್‌ಸ್ಲಾಮ್ ಟ್ರೋಫಿ ಜಯಿಸಿದ್ದರು.

2024ರಲ್ಲಿ ಜೊಕೊವಿಕ್ ಕಠಿಣ ಪರಿಸ್ಥಿತಿ ಎದುರಿಸಿದ್ದು, ಒಂದೇ ಒಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿಲ್ಲ. ಕೇವಲ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ಜಯಿಸಿದ್ದರು.

ಬ್ರಿಸ್ಬೇನ್ ಟೂರ್ನಿಯಲ್ಲಿ ಫಾರ್ಮ್‌ನಲ್ಲಿರುವ ಗ್ರಿಗೋರ್ ಡಿಮಿಟ್ರೋವ್, ಹೋಲ್ಗರ್ ರೂನ್ ಹಾಗೂ ಫ್ರಾನ್ಸಿಸ್ ಟಿಯಾಫೊ ಸಹಿತ ಪ್ರಮುಖ ಆಟಗಾರರು ಸ್ಪರ್ಧಿಸಲಿದ್ದಾರೆ. ದೀರ್ಘ ಅನುಪಸ್ಥಿತಿಯ ನಂತರ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಟೂರ್ನಿಯಲ್ಲಿ ಆಡಲಿದ್ದಾರೆ.

ಜೊಕೊವಿಕ್ ಅವರು ಪುರುಷರ ಡಬಲ್ಸ್‌ನಲ್ಲಿ ಕಿರ್ಗಿಯೊಸ್ ಜೊತೆ ಆಡಲಿದ್ದಾರೆ.

ಸ್ಪರ್ಧಾವಳಿಯಲ್ಲಿ ಮಹಿಳೆಯ ವಿಭಾಗದಲ್ಲಿ ಅಮೆರಿಕದ ಸ್ಟಾರ್‌ಗಳಾದ ಜೆಸ್ಸಿಕಾ ಪೆಗುಲಾ ಹಾಗೂ ಎಮ್ಮಾ ನವಾರ್ರೊ ಕ್ರಮವಾಗಿ 7ನೇ ಹಾಗೂ 8ನೇ ಕ್ರಮಾಂಕದಲ್ಲಿದ್ದಾರೆ. ಮಾಜಿ ನಂ.1 ಆಟಗಾರ್ತಿ ಉನ್ಸ್ ಜಾಬಿರ್ ಹಾಗೂ ಹಿರಿಯ ಆಟಗಾರ್ತಿ ವಿಕ್ಟೋರಿಯ ಅಝರೆಂಕಾ ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News