×
Ad

ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್-2023 ; ಮಾನಸಿ-ಮುರುಗೇಶನ್‌ಗೆ ಚಿನ್ನ, ಪ್ರಮೋದ್ ಭಗತ್‌ಗೆ ಅವಳಿ ಬೆಳ್ಳಿ

Update: 2023-12-18 22:53 IST

ಮಾನಸಿ ಜೋಶಿ | Photo: X

ಹೊಸದಿಲ್ಲಿ: ಐದನೇ ಆವೃತ್ತಿಯ ಫಝಾ ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್-2023ರಲ್ಲಿ ಮಾನಸಿ ಜೋಶಿ ಹಾಗೂ ತುಳಸಿಮತಿ ಮುರುಗೇಶನ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ ಚಾಂಪಿಯನ್ ಪ್ರಮೋದ್ ಭಗತ್ ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.

ಸ್ಪರ್ಧಾವಳಿಯು ಯುಎಇನಲ್ಲಿ ಡಿಸೆಂಬರ್ 11ರಿಂದ ಡಿ.17ರ ತನಕ ನಡೆದಿತ್ತು.

ವಿಶ್ವ ಪ್ಯಾರಾ-ಬ್ಯಾಡ್ಮಿಂಟನ್‌ನಲ್ಲಿ ಎರಡನೇ ರ್ಯಾಂಕಿನಲ್ಲಿರುವ ಮಾನಸಿ ಹಾಗೂ ಮುರುಗೇಶನ್ ಮಹಿಳೆಯರ ಡಬಲ್ಸ್ ಎಸ್‌ಎಲ್‌3-ಎಸ್‌ಯು5 ವಿಭಾಗದಲ್ಲಿ ಇಂಡೋನೇಶ್ಯದ ಜೋಡಿ ಲೀಯಾ ರಾಟ್ರಿ ಒಕ್ಟಿಲಾ ಹಾಗೂ ಖಲಿಮತಸ್ ಸಾದಿಯಾರನ್ನು 15-21, 21-14 ಹಾಗೂ 21-6 ಅಂತರದಿಂದ ಮಣಿಸಿ ಚಿನ್ನ ಜಯಿಸಿದರು.

ಪ್ಯಾರಾ ಏಶ್ಯನ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಜಯಿಸಿರುವ ಭಗತ್ ಎಸ್‌ಎಲ್‌3 ಫೈನಲ್‌ನಲ್ಲಿ ಇಂಗ್ಲೆಂಡ್‌ನ ಡೇನಿಯಲ್ ಬೆಥೆಲ್ ವಿರುದ್ಧ 17-21, 18-21 ಅಂತರದಿಂದ ಸೋಲಿಸಿ ಎರಡನೇ ಸ್ಥಾನ ಪಡೆದರು.

ಮಿಕ್ಸೆಡ್ ಡಬಲ್ಸ್ ಎಸ್‌ಎಲ್‌3-ಎಸ್‌ಯು-5 ವಿಭಾಗದ ಫೈನಲ್‌ನಲ್ಲಿ ಭಗತ್ ಹಾಗೂ ಮನಿಶಾ ರಾಮ್‌ದಾಸ್ ಇಂಡೋನೇಶ್ಯದ ಹಿಕ್ಮತ್ ರಾಂದಾನಿ ಹಾಗೂ ಲಿಯಾನಿ ಒಕ್ಟಿಲಾ ವಿರುದ್ಧ 14-21, 11-21 ಅಂತರದಿಂದ ಸೋತಿದ್ದಾರೆ.

ಟೀಮ್ ಇಂಡಿಯಾವು ಮಿಕ್ಸೆಡ್ ಡಬಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದೆ. ಮಿಕ್ಸೆಡ್ ಡಬಲ್ಸ್ ಎಸ್‌ಎಲ್‌3 ಹಾಗೂ ಎಸ್‌ಯು5ನಲ್ಲಿ ಕುಮಾರ ನಿತೇಶ್ ಹಾಗೂ ತುಳಸಿಮತಿ ಮುರುಗೇಶನ್ ಕಂಚು ಜಯಿಸಿದರು.

ಪುರುಷರ ಎಸ್‌ಎಲ್‌4 ವಿಭಾಗದಲ್ಲಿ ಟೋಕಿಯೊ ಗೇಮ್ಸ್‌ನ ಬೆಳ್ಳಿ ವಿಜೇತ, ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಜಯಿಸಿದರು. ಸುಕಾಂತ್ ಕದಮ್ ಹಾಗೂ ತರುಣ್ ಕಂಚಿನ ಪದಕ ಜಯಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ(ಎಸ್‌ಎಲ್‌4)ಪಾಲಕ್ ಕೊಹ್ಲಿ ಕಂಚು ಬಾಚಿಕೊಂಡರು.

ಪುರುಷರ ಡಬಲ್ಸ್ ಎಸ್‌ಎಲ್‌3-ಎಸ್‌ಎಲ್ 4 ವಿಭಾಗದಲ್ಲಿ ಮನೋಜ್ ಸರ್ಕಾರ್ ಹಾಗೂ ಅವರ ಕೊರಿಯಾದ ಜೊತೆಗಾರ ಚೊ ನಡಾನ್ ಬೆಳ್ಳಿ ಜಯಿಸಿದರು. ಕುಮಾರ ನಿತೇಶ್ ಹಾಗೂ ತರುಣ್ ಕಂಚು ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News