ದುಲೀಪ್ ಟ್ರೋಫಿ ಫೈನಲ್ | ಕೇಂದ್ರ ವಲಯಕ್ಕೆ ಪ್ರಶಸ್ತಿ
PC : Thehindu
ಬೆಂಗಳೂರು, ಸೆ.15: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಕೊನೆಯ ದಿನವಾದ ಸೋಮವಾರ ಕೆಲವು ಅಡ್ಡಿ ಆತಂಕಗಳಿಂದ ಹೊರಬಂದ ಕೇಂದ್ರ ವಲಯ ತಂಡವು ದಕ್ಷಿಣ ವಲಯ ತಂಡವನ್ನು 6 ವಿಕೆಟ್ ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಜಯಿಸಿತು.
ಪ್ರಶಸ್ತಿ ಗೆಲ್ಲಲು ಸೋಮವಾರ ಕೇವಲ 65 ರನ್ ಗುರಿ ಪಡೆದಿದ್ದ ಕೇಂದ್ರ ವಲಯ ತಂಡವು 20.3 ಓವರ್‌ಗಳಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ತಲುಪಿತು.
ಕೇಂದ್ರ ವಲಯ 2014-15 ಆವೃತ್ತಿಯ ನಂತರ ಮೊದಲ ಬಾರಿ ದುಲೀಪ್ ಟ್ರೋಫಿ ಪ್ರಶಸ್ತಿಯನ್ನು ಜಯಿಸಿದೆ. ಈ ಹಿಂದೆ ಪಿಯೂಷ್ ಚಾವ್ಲಾ ನೇತೃತ್ವದಲ್ಲಿ ಕೇಂದ್ರ ವಲಯ ತಂಡವು ಟ್ರೋಫಿ ಗೆದ್ದುಕೊಂಡಿತ್ತು.
ಮೊದಲ ಇನಿಂಗ್ಸ್‌ನಲ್ಲಿ 511 ರನ್ ಗಳಿಸಿದ್ದ ಕೇಂದ್ರ ವಲಯವು ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸುತ್ತಾ ಬಂದಿದೆ.
ದಕ್ಷಿಣ ವಲಯ ತಂಡವು ಮೊದಲ ದಿನವೇ ಬ್ಯಾಟಿಂಗ್ ವೈಫಲ್ಯ ಕಂಡಿದ್ದು, ಬ್ಯಾಟಿಂಗ್ ಸ್ನೇಹಿ ಬೆಂಗಳೂರಿನ ಬಿಸಿಸಿಐ ಮೈದಾನದಲ್ಲಿ ತನ್ನ ಪ್ರಥಮಿ ಇನಿಂಗ್ಸ್ ನಲ್ಲಿ ಕೇವಲ 149 ರನ್‌ಗೆ ಆಲೌಟಾಯಿತು.
ಬ್ಯಾಟರ್‌ಗಳು ಮೊದಲ ಇನಿಂಗ್ಸ್ ನಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಆಡಬೇಕಾಗಿತ್ತು ಎಂದು ದಕ್ಷಿಣ ವಲಯದ ಕೋಚ್ ಹಾಗೂ ಭಾರತದ ಮಾಜಿ ವೇಗದ ಬೌಲರ್ ಎಲ್.ಬಾಲಾಜಿ ಒಪ್ಪಿಕೊಂಡಿದ್ದಾರೆ.
‘‘ಕೆಲವೊಂದು ಹೊಡೆತಗಳು ಅನಗತ್ಯವಾಗಿತ್ತು. ಆದರೆ ಇದು ಯುವ ಬ್ಯಾಟಿಂಗ್ ವಿಭಾಗವಾಗಿದೆ. ಅವರು ಖಂಡಿತವಾಗಿಯೂ ಇದರಿಂದ ಪಾಠ ಕಲಿಯಲಿದ್ದಾರೆ’’ ಎಂದು ಆರ್. ಸ್ಮರಣ್ ಹಾಗೂ ಆಂಡ್ರೆ ಸಿದ್ದಾರ್ಥ್ ರನ್ನು ಉಲ್ಲೇಖಿಸಿ ಬಾಲಾಜಿ ಹೇಳಿದರು.
ಮಧ್ಯಪ್ರದೇಶದ ಆಲ್‌ರೌಂಡರ್ ಸಾರಾಂಶ್ ಜೈನ್ ‘ಸರಣಿಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಸಾರಾಂಶ್ ಪಂದ್ಯಾವಳಿಯಲ್ಲಿ ಒಟ್ಟು 16 ವಿಕೆಟ್‌ಗಳನ್ನು ಪಡೆದು ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಬ್ಯಾಟಿಂಗ್ ನಲ್ಲಿ ಎರಡು ಬಾರಿ ನಿರ್ಣಾಯಕ ಅರ್ಧಶತಕಗಳ ಸಹಿತ ಒಟ್ಟು 136 ರನ್ ಗಳಿಸಿದ್ದರು.
ಕೇಂದ್ರ ವಲಯ ತಂಡದ ಪರ ಮೊದಲ ಇನಿಂಗ್ಸ್ ನಲ್ಲಿ 194 ರನ್ ಗಳಿಸಿದ್ದ ಯಶ್ ರಾಥೋಡ್ ‘ಪಂದ್ಯಶ್ರೇಷ್ಠ‘ ಪ್ರಶಸ್ತಿ ಸ್ವೀಕರಿಸಿದರು.
ಉತ್ತಮ ಪ್ರದರ್ಶನದೊಂದಿಗೆ ದೇಶೀ ಋತುವನ್ನು ಆರಂಭಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿರುವ 32ರ ವಯಸ್ಸಿನ ಸಾರಾಂಶ್ ಜೈನ್, ‘‘ಇದು ನನಗೆ ಅತ್ಯಂತ ಪ್ರಮುಖ ಸರಣಿಯಾಗಿದ್ದು, ಮುಂಬರುವ ಎಲ್ಲ ಪಂದ್ಯಾವಳಿಗಳಲ್ಲಿ ತಯಾರಿ ನಡೆಸಲು ನೆರವಾಗಲಿದೆ.ದುಲೀಪ್ ಟ್ರೋಫಿ ಟೂರ್ನಿಯಿಂದ ಆರಂಭವಾಗಿರುವ ನನ್ನ ಈ ಪ್ರದರ್ಶನವನ್ನು ಕಾಯ್ದುಕೊಂಡು ಹೋಗುವುದು ಅತ್ಯಂತ ಮುಖ್ಯವಾಗಿದೆ. ಈ ಹಂತದ ಪ್ರದರ್ಶನವು ರಾಷ್ಟ್ರೀಯ ಆಯ್ಕೆಗಾರರ ಗಮನವನ್ನು ಖಂಡಿತವಾಗಿ ಸೆಳೆಯಲಿದೆ. ಎಲ್ಲ ಆಯ್ಕೆಗಾರರು ಇಲ್ಲಿದ್ದರು. ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿ. ಉಳಿದಿರುವುದು ಆಯ್ಕೆಗಾರರಿಗೆ ಬಿಟ್ಟ ವಿಚಾರ’’ ಎಂದರು.