ಫಿಬ ಏಶ್ಯ ಕಪ್- 2025 ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಭಾರತವನ್ನು ಸೋಲಿಸಿದ ಚೀನಾ
Photo : FIBA
ಜಿದ್ದಾ (ಸೌದಿ ಅರೇಬಿಯ), ಆ. 7: ಸೌದಿ ಅರೇಬಿಯದ ಜಿದ್ದಾದಲ್ಲಿರುವ ಕಿಂಗ್ ಅಬ್ದುಲ್ಲಾ ಸ್ಪೋರ್ಟ್ಸ್ ಸಿಟಿಯಲ್ಲಿ ನಡೆಯುತ್ತಿರುವ ಫಿಬ ಏಶ್ಯ ಕಪ್ 2025 ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ, ಬುಧವಾರ ನಡೆದ ಸಿ ಗುಂಪಿನ ಪಂದ್ಯವೊಂದರಲ್ಲಿ ಭಾರತೀಯ ಪುರುಷರ ತಂಡವನ್ನು ಬಲಿಷ್ಠ ಚೀನಾ 100-69 ಅಂಕಗಳಿಂದ ಸೋಲಿಸಿದೆ.
ಮಿಂಗ್‌ಕ್ಸುವನ್ ಹು ಮತ್ತು ಜಿಯಾಯಿ ಝಾವೊ ತಲಾ 17 ಅಂಕಗಳನ್ನು ಗಳಿಸಿದ್ದು, ಚೀನಾದ ಪರ ಗರಿಷ್ಠ ಅಂಕ ಗಳಿಕೆದಾರರಾದರು. ಭಾರತದ ಪರವಾಗಿ ಅರವಿಂದ ಮುತ್ತು ಕೃಷ್ಣನ್ 16 ಅಂಕ ಗಳಿಸಿದರು.
ಇದು ಪಂದ್ಯಾವಳಿಯಲ್ಲಿ ಭಾರತದ ಸತತ ಎರಡನೇ ಸೋಲಾಗಿದೆ. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಭಾರತವು ಜೋರ್ಡಾನ್ ವಿರುದ್ಧ ಸೋಲನುಭವಿಸಿತ್ತು. ಎರಡು ಸೋಲುಗಳೊಂದಿಗೆ ಕೋಚ್ ಸ್ಕಾಟ್ ಫ್ಲೆಮಿಂಗ್‌ರ ಭಾರತೀಯ ತಂಡವು ಸಿ ಗುಂಪಿನ ತಳದಲ್ಲಿ ಸ್ಥಾನ ಪಡೆದಿದೆ. ಇದರೊಂದಿಗೆ, ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯುವ ಅದರ ಅವಕಾಶ ತೂಗುಯ್ಯಾಲೆಯಲ್ಲಿದೆ.
ಭಾರತವು ತನ್ನ ಕ್ವಾರ್ಟರ್‌ಫೈನಲ್ ಆಶೆಯನ್ನು ಜೀವಂತವಾಗಿರಿಸಬೇಕಾದರೆ ಶನಿವಾರ ಆತಿಥೇಯ ಸೌದಿ ಅರೇಬಿಯ ವಿರುದ್ಧ ನಡೆಯಲಿರುವ ಗುಂಪು ಹಂತದ ತನ್ನ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಪಂದ್ಯಾವಳಿಯ ನಿಯಮಗಳ ಪ್ರಕಾರ, ಗುಂಪುಗಳ ಅಗ್ರ ಸ್ಥಾನಿಗಳು ನೇರವಾಗಿ ಕ್ವಾರ್ಟರ್‌ಫೈನಲ್ ಪ್ರವೇಶಿಸುತ್ತಾರೆ. ಉಳಿದ ನಾಲ್ಕು ಕ್ವಾರ್ಟರ್‌ಫೈನಲ್ ಸ್ಥಾನಗಳಿಗೆ ಅರ್ಹತೆ ಪಡೆಯಲು ಎರಡು ಮತ್ತು ಮೂರನೇ ಸ್ಥಾನಗಳಲ್ಲಿರುವ ತಂಡಗಳು ಪ್ಲೇಆಫ್‌ನಲ್ಲಿ ಮುಖಾಮುಖಿಯಾಗಲಿವೆ.