ದಕ್ಷಿಣ ಆಪ್ರಿಕಾ ವಿರುದ್ಧ ಅಂತಿಮ ಏಕದಿನ: ಗೆಲುವಿಗೆ 297 ರನ್ ಗುರಿ ನೀಡಿದ ಭಾರತ
Photo : x/@bcci
ಪಾರ್ಲ್ : ಇಲ್ಲಿನ ಬೋಲ್ಯಾಂಡ್ ಪಾರ್ಕ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಅಂತಿಮ ಏಕದಿನ ಸರಣಿಯ ಪಂದ್ಯದಲ್ಲಿ ಗೆಲುವಿಗೆ ಭಾರತ ತಂಡ 297 ರನ್ ಗುರಿ ನೀಡಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಇನ್ನಿಂಗ್ ಆರಂಭಿಸಿದ ರಜತ್ ಪಾಟಿದಾರ್ ಮತ್ತು ಸಾಯಿ ಸುದರ್ಶನ್ ಜೋಡಿ ನಿಧಾನವಾಗಿ ರನ್ ಕಲೆ ಹಾಕಿತು. 4.4 ಓವರ್ ನಲ್ಲಿ ಭಾರತ ತಂಡ 34 ರನ್ ಗಳಿಸಿದ್ದಾಗ 16 ಎಸೆತಗಳಲಿ 22 ರನ್ ಗಳಿಸಿದ್ದ ಪಾಟೀದಾರ್ ನಾಂದ್ರೆ ಬರ್ಗರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಕಟ್ಟುವ ಆಟವಾಡಿದರು. 114 ಎಸೆತ ಎದುರಿಸಿದ ಸಂಜು 6 ಬೌಂಡರಿ 3 ಸಿಕ್ಸರ್ ಸಹಿತ 108 ರನ್ ಗಳಿಸಿ ಶತಕ ದಾಖಲಿಸಿದರು. ಆ ಮೂಲಕ ಸಂಜು ಸ್ಯಾಮ್ಸನ್ ಅವರು ಚೊಚ್ಚಲ ಅಂತರರಾಷ್ಟ್ರೀಯ ಶತಕ ಸಿಡಿಸಿದರು.
ನಾಯಕ ಕೆಎಲ್ ರಾಹುಲ್ 21 ರನ್ ಗಳಿಗೆ ಔಟ್ ಆದರು. ತಿಲಕ್ ವರ್ಮ 52, ರಿಂಕು ಸಿಂಗ್ 38, ವಾಷಿಂಗ್ಟನ್ ಸುಂದರ್ 14, ಅರ್ಷದೀಪ್ ಸಿಂಗ್ ಔಟಾಗದೆ 7 ರನ್ ಗಳಿಸಿದರು. 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು.
ದಕ್ಷಿಣ ಆಫ್ರಿಕಾ ಪರ ಬ್ಯುರೆನ್ ಹೆಂಡ್ರಿಕ್ಸ್ 3 ವಿಕೆಟ್ ಪಡೆದರು. ನಾಂದ್ರೆ ಬರ್ಗರ್ 2 ವಿಕೆಟ್ ಉದುರಿಸಿದರು. ಲಿಝ್ಝಾರ್ಡ್ ವಿಲಿಯಮ್ಸ್, ವಿಯಾನ್ ಮುಲ್ಡೆರ್, ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಗಳಿಸಿದರು. ಕೇಶವ್ ಮಹರಾಜ್ 2 ಮೇಡನ್ ಓವರ್ ಮಾಡಿ ಭಾರತ ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದರು.