ಫುಟ್ಬಾಲ್ ಬಾಲೋನ್ ಡಿ’ಓರ್ ಪ್ರಶಸ್ತಿ; ನಾಮ ನಿರ್ದೇಶಿತರ ಪಟ್ಟಿ ಬಿಡುಗಡೆ
PC : olympics.com
ಪ್ಯಾರಿಸ್, ಆ. 8: ಫುಟ್ಬಾಲ್ ಬಾಲೋನ್ ಡಿ’ಓರ್ (ಚಿನ್ನದ ಚೆಂಡು) ಪ್ರಶಸ್ತಿಯ ಸ್ಪರ್ಧೆಯಲ್ಲಿರುವ 30 ಪುರುಷ ಮತ್ತು 30 ಮಹಿಳಾ ನಾಮನಿರ್ದೇಶಿತರ ಪಟ್ಟಿಗಳನ್ನು ‘ಫ್ರಾನ್ಸ್ ಫುಟ್ಬಾಲ್’ ಪತ್ರಿಕೆ ಗುರುವಾರ ಬಿಡುಗಡೆಗೊಳಿಸಿದೆ. ಪ್ಯಾರಿಸ್ ನಲ್ಲಿ ಸೆಪ್ಟಂಬರ್ 22ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರ ಹೆಸರುಗಳನ್ನು ಘೋಷಿಸಲಾಗುವುದು.
ಪ್ಯಾರಿಸ್ ಸೇಂಟ್-ಜರ್ಮೈನ್ ಆಟಗಾರ ಉಸ್ಮಾನ್ ಡೆಂಬೇಲೆ ಮತ್ತು ಸ್ಪೇನ್ನ ಹದಿಹರಯದ ಲಮೀನ್ ಯಮಾಲ್ ಪುರುಷ ನಾಮನಿರ್ದೇಶಿತರ ಪಟ್ಟಿಯಲ್ಲಿದ್ದಾರೆ. ಇಂಗ್ಲೆಂಡ್ ನ ಕ್ಲೋ ಕೆಲಿ, ಲೂಸಿ ಬ್ರೋಂಝ್ ಮತ್ತು ಗೋಲ್ಕೀಪರ್ ಹನ್ನಾ ಹ್ಯಾಂಪ್ಟನ್ ಮತ್ತು ಸ್ಪೇನ್ ನ ಐಟಾನಾ ಬಾನ್ಮಟಿ ಮುಂತಾದವರು ಮಹಿಳಾ ನಾಮನಿರ್ದೇಶಿತರ ಪಟ್ಟಿಯಲ್ಲಿದ್ದಾರೆ.
ಪುರುಷರ ಪಟ್ಟಿಯಲ್ಲಿ ಡೆಂಬೇಲೆ ಸೇರಿದಂತೆ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ನ ಒಂಭತ್ತು ಆಟಗಾರರಿದ್ದಾರೆ. ಈಜಿಪ್ಟ್ನ ಮೊ ಸಲಾಹ್ ಮತ್ತು ರಿಯಲ್ ಮ್ಯಾಡ್ರಿಡ್ನ ಕೈಲಿಯನ್ ಎಂಬಾಪೆ ಕೂಡ ಸ್ಪರ್ಧೆಯಲ್ಲಿದ್ದಾರೆ.
ಕಳೆದ ವರ್ಷ ಸ್ಪೇನ್ನ ಮಿಡ್ಫೀಲ್ಡರ್ ರೋಡ್ರಿ ಚಿನ್ನದ ಚೆಂಡು ಪಶಸ್ತಿ ಗೆದ್ದಿದ್ದರು.
‘ಫ್ರಾನ್ಸ್ ಫುಟ್ಬಾಲ್’ ಪತ್ರಿಕೆ ಸ್ಥಾಪಿಸಿರುವ ‘ಚಿನ್ನದ ಚೆಂಡು’ ಪ್ರಶಸ್ತಿಯನ್ನು 1956ರಿಂದ ಪುರುಷರಿಗೆ ಮತ್ತು 2018ರಿಂದ ಮಹಿಳೆಯರಿಗೂ ನೀಡಲಾಗುತ್ತಿದೆ. ಮತದಾನದ ಮೂಲಕ, ಫಿಫಾದ ಅಗ್ರ 100 ರ‍್ಯಾಂಕಿಂಗ್ ದೇಶಗಳ ಪತ್ರಕರ್ತರು ಪುರುಷ ವಿಜೇತರನ್ನು ಮತ್ತು ಅಗ್ರ 50 ಫಿಫಾ ರ‍್ಯಾಂಕಿಂಗ್ ದೇಶಗಳ ಪತ್ರಕರ್ತರು ಮಹಿಳಾ ವಿಜೇತರನ್ನು ನಿರ್ಧರಿಸಲಿದ್ದಾರೆ.