ನಾಳೆಯಿಂದ (ಜು.23) ನಿರ್ಣಾಯಕ ನಾಲ್ಕನೇ ಟೆಸ್ಟ್ ಪಂದ್ಯ
ಮ್ಯಾಂಚೆಸ್ಟರ್: ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಹಾಗೂ ಭಾರತ ಕ್ರಿಕೆಟ್ ತಂಡಗಳು ಬುಧವಾರದಿಂದ ಓಲ್ಡ್ ಟ್ರಾಫೋರ್ಡ್‌ನಲ್ಲಿ ನಿರ್ಣಾಯಕ ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡಲಿವೆ. ಸದ್ಯ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆಯಲ್ಲಿರುವ ಆಂಗ್ಲರು ಮ್ಯಾಂಚೆಸ್ಟರ್‌ನಲ್ಲಿ ಗೆಲುವು ದಾಖಲಿಸಿದರೆ ಸರಣಿ ವಶಪಡಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಭಾರತ ಕ್ರಿಕೆಟ್ ತಂಡ ಗೆಲುವು ದಾಖಲಿಸಿದರೆ ಸರಣಿ ಸಮಬಲಗೊಳಿಸಿ ಸ್ಪರ್ಧೆಯಲ್ಲಿ ಉಳಿದುಕೊಳ್ಳಲಿದೆ.
ಲಾರ್ಡ್ಸ್‌ನಲ್ಲಿ 3ನೇ ಟೆಸ್ಟ್ ಪಂದ್ಯವನ್ನು ಕೇವಲ 22 ರನ್‌ನಿಂದ ಆಘಾತಕಾರಿ ಸೋಲುಂಡಿರುವ ಶುಭಮನ್ ಗಿಲ್ ಬಳಗವು 4ನೇ ಟೆಸ್ಟ್ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. 5 ಪಂದ್ಯಗಳ ಸರಣಿಯು ಈಗಾಗಲೇ ಹಲವು ತಿರುವು ಪಡೆದಿದೆ. ಮೊದಲ ಪಂದ್ಯವನ್ನು ಇಂಗ್ಲೆಂಡ್ 5 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದಕ್ಕೆ ತಕ್ಕ ಉತ್ತರ ನೀಡಿದ ಭಾರತವು 2ನೇ ಪಂದ್ಯವನ್ನು ಜಯಿಸಿ ಸರಣಿ ಸಮಬಲಗೊಳಿಸಿತು. ಲಾರ್ಡ್ಸ್‌ನಲ್ಲಿ ಮೇಲುಗೈ ಸಾಧಿಸಿರುವ ಬೆನ್ ಸ್ಟೋಕ್ಸ್ ಬಳಗವು ಸರಣಿಯಲ್ಲೀಗ 2-1ರಿಂದ ಮುನ್ನಡೆಯಲ್ಲಿದೆ.
ಕೆಲವು ಆಟಗಾರರ ಗಾಯಾಳು ಸಮಸ್ಯೆ ಭಾರತ ತಂಡಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದ್ದು, ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆಯ್ಕೆ ಮಾಡುವ ನಿಟ್ಟಿನಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. 4ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಸ್ಟಾರ್ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾರ ಫಿಟ್ನೆಸ್ ಕುರಿತಂತೆ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಲಾರ್ಡ್ಸ್‌ನಲ್ಲಿ ಕೇವಲ 22 ರನ್ ಅಂತರದಿಂದ ಸೋತಿರುವ ಭಾರತ ತಂಡವು ಐದು ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯಲ್ಲಿದೆ. 2007ರ ನಂತರ ಇಂಗ್ಲೆಂಡ್ ನೆಲದಲ್ಲಿ ತನ್ನ ಮೊದಲ ಟೆಸ್ಟ್ ಸರಣಿಯನ್ನು ಗೆಲ್ಲುವ ವಿಶ್ವಾಸವನ್ನು ಜೀವಂತವಾಗಿಟ್ಟುಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ನಿತೀಶ್ ಕುಮಾರ್ ರೆಡ್ಡಿ ಹಾಗೂ ಅರ್ಷದೀಪ್ ಸಿಂಗ್ ಗಾಯಗೊಂಡಿರುವ ಕಾರಣ ಬುಮ್ರಾ ಲಭ್ಯತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಕಠಿಣವಾಗಿದೆ.
ಮ್ಯಾಂಚೆಸ್ಟರ್‌ನಲ್ಲಿ ಈ ತನಕ 9 ಪಂದ್ಯಗಳಲ್ಲಿ ಆಡಿರುವ ಭಾರತವು ಮೊತ್ತ ಮೊದಲ ಗೆಲುವಿನ ಶೋಧದಲ್ಲಿದೆ. ಮೊಣಕಾಲು ನೋವಿನಿಂದಾಗಿ ಸರಣಿಯಿಂದಲೇ ಹೊರಗುಳಿದಿರುವ ಆಲ್‌ರೌಂಡರ್ ನಿತೀಶ್ ರೆಡ್ಡಿಯ ಅನುಪಸ್ಥಿತಿಯನ್ನು ಭಾರತವು ನಿಭಾಯಿಸಬೇಕಾಗಿದೆ. ರೆಡ್ಡಿ ಅನುಪಸ್ಥಿತಿಯು ಭಾರತದ ಮೂವರು ಆಲ್‌ರೌಂಡರ್‌ಗಳ ರಣತಂತ್ರದ ಮೇಲೆ ಪರಿಣಾಮಬೀರಿದೆ. ಲೀಡ್ಸ್‌ನಲ್ಲಿ ಆರಂಭವಾದ ಟೆಸ್ಟ್ ಸರಣಿಯ ನಂತರ ಈ ತಂತ್ರವು ಉತ್ತಮ ಕೆಲಸ ಮಾಡಿದೆ.
ರವೀಂದ್ರ ಜಡೇಜ ಹಾಗೂ ವಾಶಿಂಗ್ಟನ್ ಸುಂದರ್ ಅವರ ಆಲ್‌ರೌಂಡ್ ಸಾಮರ್ಥ್ಯದಿಂದಾಗಿ ಪ್ರವಾಸಿ ತಂಡವು ಸ್ಥಿರತೆ ಕಂಡುಕೊಂಡಿತ್ತು. ಈ ತಂತ್ರದಿಂದಾಗಿ 8ನೇ ಕ್ರಮಾಂಕದ ತನಕ ಬ್ಯಾಟಿಂಗ್ ಸರದಿಯು ವಿಸ್ತರಿಸಿತ್ತು. ಆದರೆ ಈ ವ್ಯವಸ್ಥೆಯನ್ನು ಮ್ಯಾಂಚೆಸ್ಟರ್‌ನಲ್ಲಿ ಮಾರ್ಪಡಿಸಬೇಕಾಗಿದೆ.
ಶಾರ್ದುಲ್ ಠಾಕೂರ್ ಅವರು ರೆಡ್ಡಿ ಬದಲಿಗೆ ಆಡುವ ಸಾಧ್ಯತೆಯಿದೆ. ಆದರೆ ಶಾರ್ದುಲ್‌ಗೆ ರೆಡ್ಡಿಯಷ್ಟು ಬ್ಯಾಟಿಂಗ್ ಸಾಮರ್ಥ್ಯವಿಲ್ಲ. ಲಾರ್ಡ್ಸ್‌ನಲ್ಲಿ 3ನೇ ಟೆಸ್ಟ್ ಪಂದ್ಯದಲ್ಲಿ ರೆಡ್ಡಿ ನಿರ್ಣಾಯಕ ವಿಕೆಟ್ ಪಡೆದಿದ್ದರು. ಹೀಗಾಗಿ ಶಾರ್ದುಲ್ ತನ್ನ ಬೌಲಿಂಗ್ ಪ್ರದರ್ಶನ ಮಟ್ಟವನ್ನು ವೃದ್ದಿಸಿಕೊಳ್ಳುವ ಅಗತ್ಯವಿದೆ.
ಟೀಮ್ ಮ್ಯಾನೇಜ್‌ಮೆಂಟ್ ಜಡೇಜರನ್ನು ಮಾತ್ರ ಸ್ಪಿನ್ನರ್ ಆಗಿ ಕಣಕ್ಕಿಳಿಸಿ 6ನೇ ಕ್ರಮಾಂಕದಲ್ಲಿ ಸ್ಪೆಷಲಿಸ್ಟ್ ಬ್ಯಾಟರ್‌ಗಳನ್ನು ಆಡಿಸಬಹುದು. ಕರುಣ್ ನಾಯರ್ ಹಾಗೂ ಸಾಯಿ ಸುದರ್ಶನ್ ಈ ಸ್ಥಾನದಲ್ಲಿ ಆಡಬಹುದು.
ಹೊಸ ವೇಗದ ಬೌಲರ್ ಅಂಶುಲ್ ಕಾಂಬೋಜ್ ಹಾಗೂ ಪ್ರಸಿದ್ಧ ಕೃಷ್ಣ ಅವರು ಗಾಯಗೊಂಡಿರುವ ವೇಗದ ಬೌಲರ್ ಆಕಾಶ್ ದೀಪ್ ಬದಲಿಗೆ ಆಡುವ ಸಾಧ್ಯತೆಯಿದೆ. ಗಮನಾರ್ಹ ವೇಗದಲ್ಲಿ ಬೌಲಿಂಗ್ ಮಾಡುತ್ತಿರುವ ಕಾಂಬೋಜ್, ಔಟ್‌ಡೋರ್ ತರಬೇತಿಯ ವೇಳೆ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ‘ಎ’ ತಂಡದಲ್ಲೂ ಕಾಂಬೋಜ್ ಸ್ಥಾನ ಪಡೆದಿದ್ದರು.
ಬುಮ್ರಾ ಅವರು ತನ್ನ ಬೆನ್ನುನೋವಿನ ಕಾರಣಕ್ಕೆ ಸರಣಿಯ 3 ಪಂದ್ಯಗಳಲ್ಲಿ ಮಾತ್ರ ಲಭ್ಯವಿರುತ್ತಾರೆ ಎಂದು ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಈ ಹಿಂದೆಯೇ ಸುಳಿವು ನೀಡಿದ್ದರು. ಒಂದು ವೇಳೆ ಅವರು 4ನೇ ಟೆಸ್ಟ್ ಪಂದ್ಯದ ಆಡುವ 11ರ ಬಳಗವನ್ನು ಸೇರಿದರೆ, ಸರಣಿ ನಿರ್ಣಾಯಕ ಐದನೇ ಟೆಸ್ಟ್ ಪಂದ್ಯದಿಂದ ವಂಚಿತರಾಗುವ ಸಾಧ್ಯತೆಯಿದೆ.
ಸದ್ಯಕ್ಕೆ ವಿಶ್ವದ ಅಗ್ರಮಾನ್ಯ ಟೆಸ್ಟ್ ಬೌಲರ್ ಆಗಿರುವ ಬುಮ್ರಾ ಅವರು ಸರಣಿಯ ಮೊದಲ ಹಾಗೂ 3ನೇ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಎರಡು ಪಂದ್ಯಗಳಲ್ಲಿ ಭಾರತ ತಂಡವು ಸೋತಿತ್ತು. ಆದರೆ ಬುಮ್ರಾ ಅನುಪಸ್ಥಿತಿಯಲ್ಲೂ 2ನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಜಯಿಸಿತ್ತು.
ಲಾರ್ಡ್ಸ್‌ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಆಲ್‌ರೌಂಡರ್‌ಗಳಾದ ಬೆನ್ ಸ್ಟೋಕ್ಸ್ ಹಾಗೂ ರವೀಂದ್ರ ಜಡೇಜ ಅವರು ತಮ್ಮ ಶಕ್ತಿಯನ್ನು ತೋರ್ಪಡಿಸಿದ್ದರು. ಸ್ಟೋಕ್ಸ್ ಎರಡೂ ಇನಿಂಗ್ಸ್‌ಗಳಲ್ಲಿ 77 ರನ್ ಗಳಿಸಿದ್ದಲ್ಲದೆ, 5 ವಿಕೆಟ್‌ಗಳನ್ನು ಉರುಳಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್‌ರನ್ನು ರನೌಟ್ ಮಾಡಿ ಪಂದ್ಯಕ್ಕೆ ತಿರುವು ನೀಡಿದ್ದರು.
34ರ ವಯಸ್ಸಿನ ಸ್ಟೋಕ್ಸ್ ಕೊನೆಯ ದಿನದಾಟದಲ್ಲಿ ದೀರ್ಘ ಸ್ಪೆಲ್ ಸೇರಿದಂತೆ 44 ಓವರ್‌ಗಳ ಬೌಲಿಂಗ್ ಮಾಡಿದ್ದರು. 6 ವರ್ಷಗಳಲ್ಲಿ ಮೊದಲ ಬಾರಿ ಗರಿಷ್ಠ ಓವರ್‌ಗಳ ಬೌಲಿಂಗ್ ಮಾಡಿದ್ದರು.
36ರ ವಯಸ್ಸಿನ ಜಡೇಜ, ಲಾರ್ಡ್ಸ್‌ನಲ್ಲಿ 181 ಎಸೆತಗಳಲ್ಲಿ ಔಟಾಗದೆ 61 ರನ್ ಗಳಿಸಿ ಭಾರತವನ್ನು ಯಶಸ್ವಿ ರನ್ ಚೇಸ್‌ನತ್ತ ಕೊಂಡೊಯ್ದಿದ್ದರು. ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿರುವ ಜಡೇಜ ಅವರು 3ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 72 ರನ್ ಗಳಿಸಿದ್ದರೆ, ಎಜ್‌ಬಾಸ್ಟನ್‌ನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ 89 ಹಾಗೂ 69 ರನ್ ಗಳಿಸಿದ್ದರು.
ಇಂಗ್ಲೆಂಡ್ ತಂಡವು 4ನೇ ಟೆಸ್ಟ್ ಪಂದ್ಯಕ್ಕಾಗಿ ತನ್ನ ಆಡುವ 11ರ ಬಳಗವನ್ನು ಈಗಾಗಲೇ ಪ್ರಕಟಿಸಿದ್ದು, ಕೇವಲ ಒಂದು ಬದಲಾವಣೆ ಮಾಡಿದೆ. ಲಾರ್ಡ್ಸ್‌ನಲ್ಲಿ ಬೆರಳು ನೋವಿಗೆ ಒಳಗಾಗಿದ್ದ ಆಫ್ ಸ್ಪಿನ್ನರ್ ಶುಐಬ್ ಬಶೀರ್ ಸರಣಿಯಿಂದ ಹೊರಗುಳಿದಿದ್ದು, ಬಶೀರ್ ಬದಲಿಗೆ ಲಿಯಾಮ್ ಡಾಸನ್ ಆಡುವ ಅವಕಾಶ ಪಡೆದಿದ್ದಾರೆ.
ಮ್ಯಾಂಚೆಸ್ಟರ್‌ನಲ್ಲಿ ಭಾರತ-ಇಂಗ್ಲೆಂಡ್‌ನ ಗೆಲುವು-ಸೋಲಿನ ದಾಖಲೆ:
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಓಲ್ಡ್ ಟ್ರಾಫೋರ್ಡ್‌ನಲ್ಲಿ 9 ಟೆಸ್ಟ್ ಪಂದ್ಯಗಳನ್ನು ಆಡಿವೆ. ಈ ಪೈಕಿ ಭಾರತ ತಂಡವು ಒಂದೂ ಪಂದ್ಯವನ್ನು ಗೆದ್ದಿಲ್ಲ. ನಾಲ್ಕು ಪಂದ್ಯಗಳಲ್ಲಿ ಇಂಗ್ಲೆಂಡ್ ಜಯಭೇರಿ ಬಾರಿಸಿದ್ದರೆ, ಭಾರತವು ಉಳಿದ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಶಕ್ತವಾಗಿತ್ತು.