×
Ad

ಫ್ರೆಂಚ್ ಓಪನ್ | ರೋಹನ್, ಯೂಕಿ ಭಾಂಬ್ರಿ ನಿರ್ಗಮನ

Update: 2025-06-01 23:07 IST

ರೋಹನ್ ಬೋಪಣ್ಣ | PC : PTI

ಪ್ಯಾರಿಸ್: ರೋಹನ್ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಪ್ರತ್ಯೇಕ ಮೂರನೇ ಸುತ್ತಿನ ಡಬಲ್ಸ್ ಪಂದ್ಯಗಳಲ್ಲಿ ಸೋಲುವುದರೊಂದಿಗೆ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಭಾರತದ ಅಭಿಯಾನ ರವಿವಾರ ಮುಕ್ತಾಯಗೊಂಡಿದೆ.

ಪುರುಷರ ಡಬಲ್ಸ್ ನಲ್ಲಿ ಬೋಪಣ್ಣ ಮತ್ತು ಅವರ ಝೆಕ್ ಜೊತೆಗಾರ ಆ್ಯಡಮ್ ಪವ್ಲಸೆಕ್ ಎರಡನೇ ಶ್ರೇಯಾಂಕದ ಹ್ಯಾರಿ ಹೆಲಿಯೊವಾರ ಮತ್ತು ಹೆನ್ರಿ ಪ್ಯಾಟನ್ ವಿರುದ್ಧ ತೀವ್ರ ಪ್ರತಿ ಹೋರಾಟ ನೀಡಿದರೂ, ಅಂತಿಮವಾಗಿ 2-6, 6-7(5) ಸೆಟ್ಗಳಿಂದ ಸೋಲನುಭವಿಸಿದರು.

ಇನ್ನೊಂದು ಪುರುಷರ ಡಬಲ್ಸ್ ಪಂದ್ಯದಲ್ಲಿ, ಭಾಂಬ್ರಿ ಮತ್ತು ಅವರ ಅಮೆರಿಕದ ಜೊತೆಗಾರ ರಾಬರ್ಟ್ ಗ್ಯಾಲೋವೆ ಅಮೆರಿಕದ ಜೋಡಿ ಕ್ರಿಶ್ಚಿಯನ್ ಹ್ಯಾರಿಸನ್ ಮತ್ತು ಇವಾನ್ ಕಿಂಗ್ ವಿರುದ್ಧ 4-6, 4-6 ಸೆಟ್ಗಳಿಂದ ಸೋಲನುಭವಿಸಿದರು.

ಬೋಪಣ್ಣ ಎರಡನೇ ಸೆಟ್ನಲ್ಲಿ ಉತ್ತಮ ಆರಂಭ ನೀಡಿದರು. ತನ್ನ ಸರ್ವ್ನಲ್ಲಿ ಯಾವುದೇ ಅಂಕವನ್ನು ಅವರು ಬಿಟ್ಟುಕೊಡಲಿಲ್ಲ. ಎಡಗೈ ಆಟಗಾರ ಪ್ಯಾಟನ್ ಕೂಡ ತನ್ನ ಸರ್ವ ಸಾಮರ್ಥ್ಯವನ್ನೂ ಪ್ರದರ್ಶಿಸಿ ಕೆಲವು ಶಕ್ತಿಶಾಲಿ ಬಾಗಿದ ಸರ್ವ್ಗಳನ್ನು ನೀಡಿದರು.

ಅಂತಿಮವಾಗಿ ಎರಡನೇ ಸೆಟ್ ಟೈಬ್ರೇಕರ್ನತ್ತ ಸಾಗಿತು. ಟೈಬ್ರೇಕರ್ನಲ್ಲಿ ಬೋಪಣ್ಣ ಜೋಡಿ ಪರಾಭವಗೊಂಡಿತು.

ಎನ್. ಶ್ರೀರಾಮ್ ಬಾಲಾಜಿ ಮತ್ತು ಋತ್ವಿಕ್ ಬೋಲಿಪಲ್ಲಿ ಈಗಾಗಲೇ ಕೂಟದಿಂದ ನಿರ್ಗಮಿಸಿದ್ದಾರೆ.

ಜೂನಿಯರ್ ವಿಭಾಗದಲ್ಲಿ ಭಾರತೀಯ ಬಾಲಕನಿಗೆ ಹಿನ್ನಡೆ

ಜೂನಿಯರ್ ವಿಭಾಗದಲ್ಲಿ, ರವಿವಾರ ಭಾರತದ ಭವಿಷ್ಯದ ಪ್ರತಿಭೆ ಹಾಗೂ ಈಗ ಅಮೆರಿಕದ ಪರವಾಗಿ ಆಡುತ್ತಿರುವ ಮಾನಸ್ ದಾಮ್ನೆ ಬಾಲಕರ ಸಿಂಗಲ್ಸ್ನಲ್ಲಿ ತನ್ನದೇ ದೇಶ (ಅಮೆರಿಕ)ದ ರೋನಿಕ್ ಕರ್ಕಿ ವಿರುದ್ಧ ಸೋತು ನಿರ್ಗಮಿಸಿದ್ದಾರೆ.

17 ವರ್ಷದ ದಾಮ್ನೆ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿ ಪ್ರಧಾನ ಸುತ್ತು ತಲುಪಿದ್ದಾರೆ. ಅವರಿಗೆ ರವಿವಾರ ತನ್ನ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಲು ಸಾಧ್ಯವಾಗಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News