×
Ad

ನಮೀಬಿಯಾ ಕ್ರಿಕೆಟ್ ತಂಡದ ಸಲಹೆಗಾರರಾಗಿ ಗ್ಯಾರಿ ಕರ್ಸ್ಟನ್ ನೇಮಕ

Update: 2025-12-08 00:06 IST

Photo: ANI

ಹೊಸದಿಲ್ಲಿ: ಭಾರತದ ವಿಶ್ವಕಪ್ ವಿಜೇತ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ನಮೀಬಿಯಾ ಪುರುಷರ ಕ್ರಿಕೆಟ್ ತಂಡದ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

2026ರ ಫೆಬ್ರವರಿ-ಮಾರ್ಚ್ ನಲ್ಲಿ ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸಲು ಮುಖ್ಯ ಕೋಚ್ ಕ್ರೆಗ್ ವಿಲಿಯಮ್ಸ್ ಅವರಿಗೆ ಕರ್ಸ್ಟನ್ ಸೂಕ್ತ ಸಲಹೆ ಸೂಚನೆ ನೀಡಲಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಆಟಗಾರನಾಗಿರುವ ಕರ್ಸ್ಟನ್ 2004ರಲ್ಲಿ ನಿವೃತ್ತಿಯಾಗಿದ್ದರು. ನಿವೃತ್ತಿಯ ನಂತರ ಕೋಚಿಂಗ್ ವೃತ್ತಿ ಆರಂಭಿಸಿದ ಅವರು 2007ರಲ್ಲಿ ಭಾರತದ ಮುಖ್ಯ ಕೋಚ್ ಆಗಿ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಟೀಮ್ ಇಂಡಿಯಾವು 2011ರಲ್ಲಿ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಮಾರ್ಗದರ್ಶನ ನೀಡಿದ್ದಾರೆ.

‘‘ಕ್ರಿಕೆಟ್ ನಮೀಬಿಯಾದೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿದೆ. ಉನ್ನತ ಮಟ್ಟದ ಕ್ರಿಕೆಟ್ ವಾತಾವರಣ ನಿರ್ಮಿಸಲು ಬದ್ಧತೆ ಹಾಗೂ ದೃಢತೆಯನ್ನು ಕಾಯ್ದುಕೊಳ್ಳುವೆ’’ ಎಂದು ಕರ್ಸ್ಟನ್ ಹೇಳಿದ್ದಾರೆ.

ಭಾರತ ತಂಡದ ಕೋಚ್ ಆದ ನಂತರ ಕರ್ಸ್ಟನ್ ಅವರು ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ವಿಶ್ವ ಮಟ್ಟದ ಟಿ-20 ಫ್ರಾಂಚೈಸಿ ಲೀಗ್ ಗಳ ಹಲವು ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ. 2024ರಲ್ಲಿ ಪಾಕಿಸ್ತಾನದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು.

2021, 2022 ಹಾಗೂ 2024ರ ಹಿಂದಿನ ಮೂರು ಟಿ-20 ವಿಶ್ವಕಪ್ ಟೂರ್ನಿಗಳಿಗೆ ಅರ್ಹತೆ ಪಡೆಯುವ ಮೂಲಕ ನಮೀಬಿಯಾ ತಂಡವು ಅಂತರ್‌ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನ ಉಪಸ್ಥಿತಿಯನ್ನು ತೋರ್ಪಡಿಸಿದೆ.

ನಮೀಬಿಯಾ 2027ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾ ಹಾಗೂ ಝಿಂಬಾಬ್ವೆ ದೇಶದೊಂದಿಗೆ ಜಂಟಿಯಾಗಿ ಆಯೋಜಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News