×
Ad

ಭಾರತೀಯ ಕ್ರಿಕೆಟ್ ತಂಡದ ಕೋಚ್‌ ಹುದ್ದೆ | ಸಂದರ್ಶನಕ್ಕೆ ಹಾಜರಾಗಲಿರುವ ಗೌತಮ್ ಗಂಭೀರ್

Update: 2024-06-18 13:20 IST

Photo : PTI

ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಕೋಚ್‌ ಹುದ್ದೆಗಾಗಿ ಅರ್ಜಿ ಸಲ್ಲಿಸಿರುವ ಏಕೈಕ ಅಭ್ಯರ್ಥಿ ಗೌತಮ್ ಗಂಭೀರ್ ಮಂಗಳವಾರದಂದು ಕ್ರಿಕೆಟ್ ಸಲಹಾ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾಗಲಿದ್ದಾರೆ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ನಂತರ ಹಾಲಿ ತರಬೇತುದಾರ ರಾಹುಲ್ ದ್ರಾವಿಡ್ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮೇ ಮಧ್ಯಭಾಗದಲ್ಲಿ ತರಬೇತುದಾರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆದರೆ, ಈ ಹುದ್ದೆಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತ್ರ ಅರ್ಜಿ ಸಲ್ಲಿಸಿದ್ದಾರೆ.

ಈ ಬಾರಿಯ ಐಪಿಎಲ್ ಚಾಂಪಿಯನ್ ಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿಯೂ ಗೌತಮ್ ಗಂಭೀರ್ ಕಾರ್ಯನಿರ್ವಹಿಸಿದ್ದರು. ಸದ್ಯ ಭಾರತೀಯ ಪುರುಷರ ಕ್ರಿಕೆಟ್ ತಂಡದ ತರಬೇತುದಾರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗರಾದ ಅಶೋಕ್ ಮಲ್ಹೋತ್ತಾ, ಜತಿನ್ ಪರಾಂಜಪೆ ಹಾಗೂ ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾಗಲಿದ್ದಾರೆ.

ಇದರೊಂದಿಗೆ ಆಯ್ಕೆದಾರ ಸಲೀಲ್ ಅಂಕೋಲ ಸ್ಥಾನಕ್ಕೂ ಕ್ರಿಕೆಟ್ ಸಲಹಾ ಸಮಿತಿಯು ಸಂದರ್ಶನವನ್ನು ನಡೆಸಲಿದೆ. ಸಲೀಲ್ ಅಂಕೋಲ ಹಾಗೂ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಇಬ್ಬರೂ ಪಶ್ಚಿಮ ವಲಯಕ್ಕೆ ಸೇರಿರುವುದರಿಂದ, ಸಲೀಲ್ ಅಂಕೋಲರಿಂದ ತೆರವಾಗಲಿರುವ ಸ್ಥಾನಕ್ಕೆ ಉತ್ತರ ವಲಯದಿಂದ ಆಯ್ಕೆದಾರರು ಆಯ್ಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಚೇತನ್ ಶರ್ಮ ಬದಲು ಅಜಿತ್ ಅಗರ್ಕರ್ ಅವರನ್ನು ಮುಖ್ಯ ಆಯ್ಕೆದಾರ ಹುದ್ದೆಗೆ ನೇಮಕ ಮಾಡಲಾಗಿತ್ತು. ಚೇತನ್ ಶರ್ಮ ಸ್ಟಿಂಗ್ ಆಪರೇಷನ್ ಒಂದರ ಕೇಂದ್ರಬಿಂದು ಆಗಿದ್ದರಿಂದ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು. ಆದರೆ, ಅಜಿತ್ ಅಗರ್ಕರ್ ಮುಖ್ಯ ಆಯ್ಕೆದಾರರಾಗಿ ಅಧಿಕಾರ ಸ್ವೀಕರಿಸಿದ್ದಾಗಲೇ ಸಲೀಲ್ ಅಂಕೋಲ ಆಯ್ಕೆದಾರ ಹುದ್ದೆಯಲ್ಲಿದ್ದರು.

ಈ ಸಂದರ್ಶನಗಳು ಮುಕ್ತಾಯಗೊಂಡ ನಂತರ, ಕ್ರಿಕೆಟ್ ಸಲಹಾ ಸಮಿತಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತನ್ನ ಶಿಫಾರಸುಗಳನ್ನು ಸಲ್ಲಿಸಲಿದೆ.

ಸೌಜನ್ಯ : indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News