×
Ad

ಮುನ್ನಡೆ ಭದ್ರಪಡಿಸಿಕೊಂಡ ಗುಕೇಶ್; ಜಯದ ಹಳಿಗೆ ಮರಳಿದ ಪ್ರಜ್ಞಾನಂದ

Update: 2025-01-30 09:00 IST

PC: x.com/SportsArena1234

ಹೊಸದಿಲ್ಲಿ: ವಿಜ್ಕ್ ಆನ್ ಝೀಯಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ಬಹುನಿರೀಕ್ಷಿತ ಹತ್ತನೇ ಸುತ್ತಿನ ಹಣಾಹಣಿಯಲ್ಲಿ ಹಾಲೆಂಡ್ನ ಮ್ಯಾಕ್ಸ್ ವರ್ಮರ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತದ ಗುಕೇಶ್ ದೊಮ್ಮರಾಜು ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಕಪ್ಪು ಕಾಯಿಗಳೊಂಧಿಗೆ ಆಡಿದ ಗುಕೇಶ್, ಎದುರಾಳಿಯ ಕಿಂಗ್ಸ್ ಪಾನ್ ಆರಂಭಕ್ಕೆ ವಿಶಿಷ್ಟ ಪ್ರಿಕ್ ಡಿಫೆನ್ಸ್ ರೀತಿಯಿಂದ ಉತ್ತರಿಸಿದರು. ಆರಂಭದಲ್ಲೇ ಆಕ್ರಮಣಕಾರಿ ಪ್ರವೃತ್ತಿ ಪ್ರದರ್ಶಿಸಿದ ವಿಶ್ವ ಚೆಸ್ ನ ಅತ್ಯಂತ ಕಿರಿಯ ಚಾಂಪಿಯನ್, ಡಿಎಕ್ಸ್ ಡಿ4 ನಡೆಯೊಂದಿಗೆ ಎದುರಾಳಿಯ ಮೊದಲ ಕಾಯಿಯನ್ನು ಪಡೆದರು.

ಈ ಆಕ್ರಮಣಕಾರಿ ನಡೆಯಿಂದ ತತ್ತರಿಸಿದ 24 ವರ್ಷದ ವರ್ಮರ್ ಡ್ಯಾಂ ಸಹಜವಾಗಿಯೇ ತಪ್ಪು ನಡೆಗಳನ್ನು ಇಡಬೇಕಾಯಿತು. 30 ನಡೆಗಳು ಪೂರ್ಣಗೊಂಡ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಯಾವುದೇ ದಾರಿಯಿಲ್ಲದೇ ವರ್ಮರ್ ಡ್ಯಾಂ ಆಟದಿಂದ ಹಿಂದೆ ಸರಿದರು. ಚೆಸ್ ವಿಂಬಲ್ಡನ್ ಎನಿಸಿದ ಈ ಟೂರ್ನಿಯ 87ನೇ ಆವೃತ್ತಿಯಲ್ಲಿ ವಿಶ್ವಚಾಂಪಿಯನ್ ಗೆ ಇದು ಸತತ ಎರಡನೇ ಗೆಲುವು.

ಸ್ಲೋವಾಕಿಯಾದ ವ್ಲಾದಿಮಿರ್ ಫೆಡೊಸೀವ್ ಮತ್ತು ಪ್ರಜ್ಞಾನಂದ ರಮೇಶ್ಬಾಬು ನಡುವಿನ ಪಂದ್ಯ ಮತ್ತೊಂದು ರೋಚಕ ಅನುಭವಕ್ಕೆ ಸಾಕ್ಷಿಯಾಯಿತು. ಈ ಮುನ್ನ ಅರ್ಜುನ್ ಎರಿಗೈಸಿ, ಫ್ಯಾಬಿಯಾನ್ ಕರೂನಾ, ವಿನ್ಸೆಂಟ್ ಕೇಮರ್ ಮತ್ತು ಪೆಂಟಲ ಹರಿಕೃಷ್ಣ ಅವರ ವಿರುದ್ಧ ಗೆಲುವು ಸಾಧಿಸಿ ಕೇವಲ ಅಲೆಕ್ಸಿ ಸರೇನಾ ವಿರುದ್ಧ ಮಾತ್ರ ಸೋತಿದ್ದ ಫೆಡೊಸೋವ್ ಈ ಪಂದ್ಯದಲ್ಲಿ ಪ್ರಜ್ಞಾನಂದಗೆ ಶರಣಾದರು.

ಹತ್ತನೇ ಸುತ್ತಿನ ಬಳಿಕ ಗುಕೇಶ್ 7.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುನ್ನಡೆದಿದ್ದು, ನೊದಿರ್ಬೆಕ್ ಅಬ್ದುಸತ್ತರೋವ್ (7.0) ಎರಡನೇ ಸ್ಥಾನದಲ್ಲಿದ್ದಾರೆ. ಬುಧವಾರದ ಗೆಲುವಿನೊಂದಿಗೆ 6.5 ಅಂಕ ಸಂಪಾದಿಸಿರುವ ಪ್ರಜ್ಞಾನಂದ ಮೂರನೇ ಸ್ಥಾನ ಗಳಿಸಿದ್ದಾರೆ. ಚಾಲೆಂಜರ್ಸ್ ವಿಭಾಗದಲ್ಲಿ ಥಾಯ್ ದೈ ವಾನ್ ಗುಯೆನ್ 7.5 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News