3,000 ಮೀ. ಒಳಾಂಗಣ ಓಟ: ರಾಷ್ಟ್ರೀಯ ದಾಖಲೆ ಮುರಿದ ಗುಲ್ವೀರ್ ಸಿಂಗ್
ಗುಲ್ವೀರ್ ಸಿಂಗ್ | Credit: SAI Media
ಹೊಸದಿಲ್ಲಿ: ಹಾಂಗ್‌ಝೌ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಗುಲ್ವೀರ್ ಸಿಂಗ್ ಅವರು ಬೋಸ್ಟನ್‌ನಲ್ಲಿ ನಡೆದ ಬಿಯು ಡೇವಿಡ್ ವೆಲೆಂಟೈನ್ ಇನ್ವಿಟೇಶನಲ್ ಕೂಟದಲ್ಲಿ ಪುರುಷರ 3,000 ಮೀ. ಒಳಾಂಗಣ ಓಟದಲ್ಲಿ 16 ವರ್ಷದ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದು ಗಮನ ಸೆಳೆದರು.
26 ರ ಹರೆಯದ ಆರ್ಮಿ ರನ್ನರ್ ಗುಲ್ವೀರ್ ಸಿಂಗ್ 7:38.26 ಸೆಕೆಂಡ್‌ನಲ್ಲಿ ಗುರಿ ತಲುಪಿ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು. 2008ರಲ್ಲಿ ಸುರೇಂದರ್ ಸಿಂಗ್(7:49.47)ನಿರ್ಮಿಸಿದ್ದ ಭಾರತೀಯ ದಾಖಲೆಯನ್ನು ಮುರಿದರು.
ಸುರೇಂದರ್ ಪ್ರಸ್ತುತ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಅತ್ಯುತ್ತಮ ಪ್ರದರ್ಶನ ನೀಡಿರುವ ಗುಲ್ವೀರ್ ಸಿಂಗ್ 2025ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 10,000 ಮೀ.ನಲ್ಲಿ ನೇರ ಅರ್ಹತೆ ಪಡೆಯುವತ್ತ ಚಿತ್ತ ಹರಿಸಿದ್ದಾರೆ.
‘‘ಬೋಸ್ಟನ್‌ನಲ್ಲಿ ನಡೆದ ಈ ವರ್ಷ ನಾನು ಆಡಿರುವ ಮೊದಲ ಒಳಾಂಗಣ ಓಟದಲ್ಲಿ ಉತ್ತಮ ಸಮಯದಲ್ಲಿ ಗುರಿ ತಲುಪಿದ್ದಕ್ಕೆ ಸಂತೋಷವಾಗಿದೆ. 3000 ಮೀ.(ಒಳಾಂಗಣ)ಸ್ಪರ್ಧೆಯಲ್ಲಿ ನೀಡಿರುವ ಉತ್ತಮ ಪ್ರದರ್ಶನವು ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಇದರಿಂದ ಮುಂಬರುವ ಹೊರಾಂಗಣದ ಓಟಗಳಲ್ಲಿ ನಾನು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ’’ ಎಂದು ಏಶ್ಯನ್ ಗೇಮ್ಸ್‌ನಲ್ಲಿ 10,000 ಮೀ. ಓಟದಲ್ಲಿ ಕಂಚಿನ ಪದಕ ಜಯಿಸಿದ್ದ ಗುಲ್ವೀರ್ ಹೇಳಿದ್ದಾರೆ.
ಗುಲ್ವೀರ್ 2023ರಲ್ಲಿ 5,000 ಮೀ.(13:11.82)ಹಾಗೂ 10,000 ಮೀ.(27:14.88)ಹೊರಾಂಗಣ ಸ್ಪರ್ಧೆಗಳಲ್ಲಿ ನೂತನ ರಾಷ್ಟ್ರೀಯ ದಾಖಲೆಯನ್ನು ಮಾಡಿದ್ದರು.
ಇದೇ ವೇಳೆ ಭಾರತದ ರಾಹುಲ್ ಅವರು 3,000 ಮೀ. ಒಳಾಂಗಣ ಓಟದಲ್ಲಿ 7:55.00 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಕಾರ್ತಿಕ್ ಕುಮಾರ್ ಪುರುಷರ 5,000 ಮೀ. ಒಳಾಂಗಣ ಸ್ಪರ್ಧೆಯನ್ನು 14:04.67 ಸೆಕೆಂಡ್‌ನಲ್ಲಿ ಪೂರೈಸಿದರು.
ಭಾರತದ ಮಧ್ಯಮ ಹಾಗೂ ದೂರ ಅಂತರದ ಓಟಗಾರರು ಸದ್ಯ ಅಮೆರಿಕದಲ್ಲಿ ವಿದೇಶಿ ಕೋಚ್ ಸ್ಕಾಟ್ ಸಿಮ್ಮನ್ಸ್ ಮಾರ್ಗದರ್ಶನದಲ್ಲಿ ತರಬೇತಿ ನಿರತರಾಗಿದ್ದಾರೆ. ಮುಂಬರುವ ಏಶ್ಯನ್ ಹಾಗೂ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸುತ್ತಿದ್ದಾರೆ.