Photo Credit : PTI 

ಹೊಸದಿಲ್ಲಿ: ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಲು ಜಪಾನಿನ ಐಚಿ-ನಗೋಯಕ್ಕೆ ಪ್ರಯಾಣಿಸಲಿರುವ ಭಾರತೀಯ ಪ್ಯಾರಾ ಕ್ರೀಡಾಪಟುಗಳಿಗೆ ಗುರುವಾರ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದ ವೇಳೆ ನಾಟಕೀಯ ಘಟನೆ ನಡೆದಿದೆ. ಹಲವಾರು ಪ್ಯಾರಾ-ಶೂಟರ್‌ಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಅಧ್ಯಕ್ಷ ದೇವೇಂದ್ರ ಜಜಾರಿಯಾ ಸಹಿತ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಹಿರಿಯ ಅಧಿಕಾರಿಗಳು ಪ್ರತಿಭಟನಾಕಾರರನ್ನು ಭೇಟಿ ಮಾಡಿದರು. ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿದರು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಆದರೆ ಶೂಟರ್‌ಗಳು ತಮ್ಮ ಸಮಸ್ಯೆಯನ್ನು ವಿವರಿಸುತ್ತಾ ಘೋಷಣೆಗಳನ್ನು ಕೂಗುತ್ತಾ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.

ಈ ಎಲ್ಲ ಆರೋಪಗಳನ್ನು ನಿರಾಕರಿಸಿರುವ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ, ಅಕ್ಟೋಬರ್ 18ರಿಂದ 24ರ ತನಕ ನಿಗದಿಯಾಗಿರುವ ಐಚಿ-ನಗೋಯ ಪ್ಯಾರಾ ಏಶ್ಯನ್ ಕ್ರೀಡಾಕೂಟಕ್ಕೆ ತಂಡವನ್ನು ಸಂಪೂರ್ಣವಾಗಿ ಅರ್ಹತೆ ಹಾಗೂ ನಿಗದಿತ ಮಾನದಂಡಗಳ ಪ್ರಕಾರ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ ಎಂದಿದೆ.

ಪ್ಯಾರ್ ಶೂಟರ್‌ಗಳಾದ ಸಂದೀಪ್ ಕುಮಾರ್ ಹಾಗೂ ಆಕಾಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಉತ್ತಮ ಶ್ರೇಯಾಂಕ ಹಾಗೂ ಪ್ರದರ್ಶನಗಳ ಹೊರತಾಗಿಯೂ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದನ್ನು ಅವರು ಪ್ರಶ್ನ್ನಿಸಿದರು.

ಸಂದೀಪ್ ಏಶ್ಯದಲ್ಲಿ ಮೂರನೇ ಶ್ರೇಯಾಂಕವನ್ನು ಹೊಂದಿದ್ದರೆ, ಆಕಾಶ್ ಅಗ್ರ ರ್ಯಾಂಕಿನ ಶೂಟರ್ ಆಗಿದ್ದಾರೆ. ಏಶ್ಯದಲ್ಲಿ 14ನೇ ರ್ಯಾಂಕಿನಲ್ಲಿರುವ ರುದ್ರಾಂಶ್ ಖಂಡೇಲ್‌ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದನ್ನು ಸಂದೀಪ್, ಆಕಾಶ್ ಪ್ರಶ್ನಿಸಿದ್ದಾರೆ.

ಆಯ್ಕೆಯ ಷರತ್ತಾಗಿ ಕ್ರೀಡಾಪಟುಗಳು ಸರಕಾರಿ ನಗದು ಬಹುಮಾನದ ಮೊತ್ತದಿಂದ ಶೇ.20ರಷ್ಟು ಕಮಿಶನ್ ಪಾವತಿಸುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಶೂಟರ್‌ಗಳು ಗಂಭೀರ ಆರೋಪ ಮಾಡಿದ್ದಾರೆ. ನಿರ್ದಿಷ್ಟ ಶೂಟರ್‌ಗಳಿಗೆ ಅನುಕೂಲವಾಗುವಂತೆ ಅಂತರ್‌ರಾಷ್ಟ್ರೀಯ ಕೋಟಾ ಸ್ಥಾನಗಳು ಹಾಗೂ ಅರ್ಹತಾ ಅಂಕಗಳಲ್ಲಿ ತಿರುಚುವಿಕೆ ನಡೆಸಲಾಗಿದೆ ಎಂದು ಅವರು ಆರೋಪಿಸಿದರು.

ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿರುವ ಪೋರ್ಚ್ ಪ್ರದೇಶದ ಹೊರಗೆ ಪ್ರತಿಭಟನೆ ನಡೆದಿದ್ದು, ಭಾರತದ ಮುಖ್ಯ ಕೋಚ್ ಸತ್ಯನಾರಾಯಣ ಹಾಗೂ ದೇವೇಂದ್ರ ಜಿಜಾರಿಯಾ ಅತ್ಲೀಟ್‌ಗಳೊಂದಿಗೆ ಮಾತುಕತೆ ನಡೆಸಿ ಪ್ರತಿಭಟನೆ ಕೊನೆಗೊಳಿಸಲು ಕೇಳಿಕೊಂಡರು. ಆದರೆ ಶೂಟರ್‌ಗಳು ತಮ್ಮ ನಿಲುವಿಗೆ ಬದ್ದರಾದರು.

ಪ್ರತಿಭಟನೆ ನಡೆಯುತ್ತಿರುವಾಗಲೇ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor