Photo Credit : PTI 

ರಾಂಚಿ: ವೆಸ್ಟ್‌ಇಂಡೀಸ್ ತಂಡದ ವಿರುದ್ಧ ಶುಕ್ರವಾರ ನಡೆಯಲಿರುವ ಎರಡನೇ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಡಲು ಸಜ್ಜಾಗುತ್ತಿರುವ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ಭಾರತ ಕ್ರಿಕೆಟ್ ತಂಡಕ್ಕೆ ಸಂಜು ಸ್ಯಾಮ್ಸನ್ ಕಳಪೆ ಪ್ರದರ್ಶನ ಏಕೈಕ ಕಳವಳಕಾರಿ ವಿಷಯವಾಗಿದೆ.

ಮತ್ತೊಂದು ಗೆಲುವು ದಾಖಲಿಸಿದರೆ ಭಾರತ ತಂಡವು ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಬಹುದು. ಆದರೆ, ಸ್ಯಾಮ್ಸನ್ ಇತ್ತೀಚೆಗೆ ರನ್‌ಗಾಗಿ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಅಗ್ರ ಸರದಿಯಲ್ಲಿ ಬದಲಾವಣೆ ಮಾಡುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ.

ಸ್ಯಾಮ್ಸನ್ ಕಳೆದ ನಾಲ್ಕು ಇನಿಂಗ್ಸ್‌ಗಳಲ್ಲಿ 9, 7, 2 ಹಾಗೂ 11 ರನ್ ಗಳಿಸಿದ್ದು ತೀವ್ರ ಒತ್ತಡದಲ್ಲಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಅವರ ಜೊತೆಯಾಟವು ನೀರಸವಾಗಿದ್ದು, 7, 12, 2 ಹಾಗೂ 29 ರನ್ ಸೇರಿಸಿದ್ದರು. ಕೇರಳದ ಬ್ಯಾಟರ್ ಉತ್ತಮ ಅವಕಾಶಗಳನ್ನು ಹೊಂದಿದ್ದರೂ ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸುವಲ್ಲಿ ಎಡವುತ್ತಿದ್ದಾರೆ. ಹೀಗಾಗಿ ಟೀಮ್ ಮ್ಯಾನೇಜ್‌ಮೆಂಟ್ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅಭಿಷೇಕ್ ಶರ್ಮಾರೊಂದಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ನೀಡಲು ಯೋಚಿಸುತ್ತಿದೆ.

ಮತ್ತೊಂದು ಅವಕಾಶಕ್ಕೆ ಕಾಯುತ್ತಿರುವ ಸೂರ್ಯವಂಶಿ: ಟಿ-20 ಕ್ರಿಕೆಟ್‌ನಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಸೂರ್ಯವಂಶಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಎಲ್ಲ ರೀತಿಯ ಹೊಡೆತಗಳನ್ನು ಬಾರಿಸಬಲ್ಲ ಸೂರ್ಯವಂಶಿ, ಬೌಲರ್‌ಗಳನ್ನು ಆರಂಭದಿಂದಲೇ ದಂಡಿಸುವ ವಿಶ್ವಾಸ ಹೊಂದಿದ್ದಾರೆ.

ಪಂದ್ಯದ ದಿಕ್ಕನ್ನು ಬದಲಿಸುವ ಅವರ ಸಾಮರ್ಥ್ಯವು ಭಾರತ ತಂಡದಲ್ಲಿ ಆಕರ್ಷಣೀಯ ಆಯ್ಕೆಯನ್ನಾಗಿಸಿದೆ. ಭಾರತ ತಂಡವು ಈ ತನಕ ಆರಂಭಿಕ ಜೋಡಿಗಳಾದ ಅಭಿಷೇಕ್ ಹಾಗೂ ಸ್ಯಾಮ್ಸನ್‌ರನ್ನು ಹೆಚ್ಚು ನೆಚ್ಚಿಕೊಂಡಿದೆ.

ಶ್ರೇಯಸ್ ಅಯ್ಯರ್ ಅವರ ಫಾರ್ಮ್ ಅಗ್ರ ಸರದಿಯಲ್ಲಿನ ಒತ್ತಡವನ್ನು ಕಡಿಮೆಗೊಳಿಸಿದೆ. ಭಾರತ ತಂಡದ ನಾಯಕ ತನ್ನ 68ನೇ ಟಿ-20 ಪಂದ್ಯದಲ್ಲಿ ಚೊಚ್ಚಲ ಶತಕ ಗಳಿಸಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಭಾರತದ ಏಳನೇ ಹಾಗೂ ವಿಶ್ವದ 36ನೇ ಆಟಗಾರನಾಗಿದ್ದಾರೆ.

ಮಯಾಂಕ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ: ಲಕ್ನೊದಲ್ಲಿ ನಡೆದಿದ್ದ ಮೊದಲ ಟಿ-20 ಪಂದ್ಯದಲ್ಲಿ ಮಯಾಂಕ್ ಯಾದವ್ ದುಬಾರಿ ಬೌಲರ್ ಆಗಿದ್ದರಿಂದ ಭಾರತ ತಂಡವು ತನ್ನ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಮಾಡುವ ಸಾಧ್ಯತೆಯಿದೆ.

ಐರ್‌ಲ್ಯಾಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಮಿಂಚಿದ ನಂತರ ಗಾಯದಿಂದ ಚೇತರಿಸಿಕೊಂಡು ವಾಪಸಾಗಿರುವ ಪ್ರಿನ್ಸ್ ಯಾದವ್ 11ರ ಬಳಗದಲ್ಲಿ ಮಯಾಂಕ್ ಬದಲಿಗೆ ಆಡುವ ನಿರೀಕ್ಷೆ ಇದೆ.

ವೇಗದ ಬೌಲರ್ ಮಯಾಂಕ್ ಮೊದಲ ಓವರ್‌ನಲ್ಲಿ 16 ರನ್ ನೀಡಿದ್ದರು. ಮಧ್ಯಮ ಓವರ್‌ಗಳು ಹಾಗೂ ಡೆತ್ ಓವರ್‌ನಲ್ಲೂ ರನ್ ಸೋರಿಕೆಯನ್ನು ಮುಂದುವರಿಸಿದ್ದರು. 19ನೇ ಓವರ್‌ನಲ್ಲಿ ವೆಸ್ಟ್‌ಇಂಡೀಸ್‌ನ ಗರಿಷ್ಠ ಸ್ಕೋರರ್ ಶೆರ್ಫಾನ್ ರುದರ್‌ಫೋರ್ಡ್ ವಿಕೆಟನ್ನು ಪಡೆದು ಮೇಲುಗೈ ಒದಗಿಸಿದ್ದರು.

ಭಾರತ ತಂಡವು ಆಲ್‌ರೌಂಡರ್ ನಿತೀಶ್ ರೆಡ್ಡಿ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡು ಹೊಸ ಚೆಂಡಿನಲ್ಲಿ ದಾಳಿಗಿಳಿಸುವ ನಿರೀಕ್ಷೆ ಇದೆ. ಆದರೆ ಈ ಯೋಜನೆಯಿಂದ ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ.

ಮಿಂಚಿದ ಸ್ಪಿನ್ನರ್‌ಗಳು: ಕುಲದೀಪ್ ಯಾದವ್ ಆಡುವ 11ರ ಬಳಗದಲ್ಲಿ ಅಕ್ಷರ್ ಪಟೇಲ್‌ರನ್ನು ಸೇರಿದ ನಂತರ ಮೊದಲ ಟಿ-20 ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳು ಹೆಚ್ಚು ನೆಲೆ ಕಂಡುಕೊಂಡಂತೆ ಭಾಸವಾಗಿದೆ. ಈ ಇಬ್ಬರು ಸ್ಪಿನ್ನರ್‌ಗಳು ತಲಾ ಎರಡು ವಿಕೆಟ್‌ಗಳನ್ನು ಪಡೆದು ವೆಸ್ಟ್‌ಇಂಡೀಸ್ ಬ್ಯಾಟರ್‌ಗಳನ್ನು ಒತ್ತಡಕ್ಕೆ ಸಿಲುಕಿಸಿದರು.

ಯುವ ಆಲ್‌ರೌಂಡರ್ ನಮನ್ ಧೀರ್ ತನ್ನ ಆಫ್ ಸ್ಪಿನ್ ಬೌಲಿಂಗ್‌ನ ಮೂಲಕ ಭಾರತ ತಂಡಕ್ಕೆ ಆಸರೆಯಾದರು. ಮೊದಲ ಪಂದ್ಯದಲ್ಲಿ 31 ರನ್‌ಗೆ 3 ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಈ ವರ್ಷಾರಂಭದಲ್ಲಿ ನಡೆದಿದ್ದ ವಿಶ್ವಕಪ್ ನಂತರ ಅಕ್ಷರ್ ಪಟೇಲ್ ಅವರು ಪವರ್‌ಪ್ಲೇನಲ್ಲಿ ವಿಶ್ವ ಶ್ರೇಷ್ಠ ಬೌಲರ್ ಆಗಿದ್ದಾರೆ. 4.71ರ ಇಕಾನಮಿ ರೇಟ್‌ನಲ್ಲಿ 15 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ.

ವೆಸ್ಟ್‌ಇಂಡೀಸ್ ತಂಡವು ಮೊದಲ ಟಿ-20ಯಲ್ಲಿ ಪಾದಾರ್ಪಣೆಗೈದಿದ್ದ ಕಮಿಲ್ ಪೂರನ್‌ಬದಲಿಗೆ ಏಕದಿನ ಸರಣಿಯಲ್ಲಿ ಮಿಂಚಿದ್ದ ಆಮಿರ್ ಜಾಂಗೂಗೆ ಅವಕಾಶ ಕಲ್ಪಿಸುವ ಯೋಜನೆಯಲ್ಲಿದೆ.

ಪಿಚ್ ರಿಪೋರ್ಟ್: ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನ ಪಿಚ್ ಹಸಿರು ಹುಲ್ಲಿನಿಂದ ಆವರಿಸಿದ್ದರೂ ಕಠಿಣವಿದ್ದಂತೆ ಕಾಣಿಸುತ್ತಿದೆ. ಚೆಂಡು ಪುಟಿದೇಳಬಹುದು, ಹೊಸ ಚೆಂಡು ಆರಂಭದಲ್ಲಿ ಬೌಲರ್‌ಗಳಿಗೆ ಸ್ವಲ್ಪ ನೆರವಾಗಬಹುದು.

ರಾಂಚಿ ಏಳು ಟಿ-20 ಪಂದ್ಯಗಳ ಆತಿಥ್ಯವನ್ನು ವಹಿಸಿದೆ. 2023ರ ಜನವರಿ ನಂತರ ರಾತ್ರಿ ವೇಳೆ ಟಿ-20 ಪಂದ್ಯ ಆಯೋಜಿಸಿಲ್ಲ. ರಾಂಚಿಯಲ್ಲಿ ರಾತ್ರಿ ವೇಳೆ ನಡೆದಿದ್ದ 10 ಪಂದ್ಯಗಳಲ್ಲಿ ಒಮ್ಮೆ ಮಾತ್ರ 200ಕ್ಕೂ ಅಧಿಕ ರನ್ ದಾಖಲಾಗಿತ್ತು. ಎರಡನೇ ಬ್ಯಾಟಿಂಗ್ ಮಾಡಿದ್ದ ತಂಡಗಳು ಅಲ್ಪ ಮೇಲುಗೈ ಸಾಧಿಸಿದ್ದವು. ರನ್ ಚೇಸಿಂಗ್ ಮಾಡಿದ್ದ ತಂಡವು ನಾಲ್ಕು ಪಂದ್ಯಗಳನ್ನು ಜಯಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ತಂಡವು ಮೂರು ಪಂದ್ಯಗಳನ್ನು ಗೆದ್ದಿದೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 138. ಭಾರತವು ಶ್ರೀಲಂಕಾದ ವಿರುದ್ಧ ಗರಿಷ್ಠ 6 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಿತ್ತು. ನ್ಯೂಝಿಲ್ಯಾಂಡ್ ತಂಡವು ಭಾರತದ ವಿರುದ್ಧ 17.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿ ಗರಿಷ್ಠ ರನ್ ಯಶಸ್ವಿಯಾಗಿ ಚೇಸ್ ಮಾಡಿತ್ತು.

ಸತತ 11ನೇ ಗೆಲುವಿನತ್ತ ಭಾರತದ ಚಿತ್ತ: ಭಾರತ ತಂಡವು ಏಳು ವರ್ಷಗಳಿಂದ ಸ್ವದೇಶದಲ್ಲಿ ಟಿ-20 ಸರಣಿಯನ್ನು ಸೋತಿಲ್ಲ. ಐರ್‌ಲ್ಯಾಂಡ್ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ಸರಣಿ ಸೋತ ನಂತರ ಭಾರತವು ಸತತ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, ಮತ್ತೊಮ್ಮೆ ಗೆಲುವಿನ ಓಟದಲ್ಲಿದೆ. ಪೂರ್ಣ ಸದಸ್ಯ ರಾಷ್ಟ್ರಗಳ ವಿರುದ್ಧ 12 ಪಂದ್ಯಗಳಲ್ಲಿ ಜಯ ಸಾಧಿಸಿ ತನ್ನದೇ ದಾಖಲೆ ಮುರಿಯುವ ವಿಶ್ವಾಸದಲ್ಲಿದೆ.

ಮೂವರು ಪ್ರಮುಖ ಆಟಗಾರರಾದ ಜಸ್‌ಪ್ರಿತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ವರುಣ್ ಚಕ್ರವರ್ತಿ ಸದ್ಯ ತಂಡದಲ್ಲಿರದಿದ್ದರೂ ವೆಸ್ಟ್‌ಇಂಡೀಸ್ ವಿರುದ್ಧ ಭಾರತ ತಂಡವು ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಭಾರತ ನೆಲದಲ್ಲಿ ಭಾರತವನ್ನು ಮಣಿಸಬೇಕಾದರೆ ವಿಂಡೀಸ್ ಪರಿಪೂರ್ಣ ಆಟ ಆಡಬೇಕಾಗುತ್ತದೆ. ಟಿ-20ಯಲ್ಲಿ 12 ಪ್ರಯತ್ನಗಳಲ್ಲಿ ಕೇವಲ ಎರಡು ಬಾರಿ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ.

ಭಾರತ(ಸಂಭಾವ್ಯ 11): 1. ಅಭಿಷೇಕ್ ಶರ್ಮಾ, 2. ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), 3.ಇಶಾನ್ ಕಿಶನ್, 4. ಶ್ರೇಯಸ್ ಅಯ್ಯರ್(ನಾಯಕ), 5. ತಿಲಕ್ ವರ್ಮಾ, 6. ಶಿವಂ ದುಬೆ, 7. ನಮನ್ ಧೀರ್, 8. ಅಕ್ಷರ್ ಪಟೇಲ್, 9. ಕುಲದೀಪ ಯಾದವ್, 10. ಪ್ರಿನ್ಸ್ ಯಾದವ್, 11. ಅರ್ಷದೀಪ ಸಿಂಗ್.

ವೆಸ್ಟ್‌ಇಂಡೀಸ್(ಸಂಭಾವ್ಯ 11): 1.ಶಾಯ್ ಹೋಪ್(ನಾಯಕ, ವಿಕೆಟ್‌ಕೀಪರ್), 2. ಕಮಿಲ್ ಪೂರನ್, 3. ಶಿಮ್ರೊನ್ ಹೆಟ್ಮೆಯರ್, 4. ರೊವ್‌ಮನ್ ಪೊವೆಲ್, 5. ಶೆರ್ಫಾನ್ ರುದರ್‌ಫೋರ್ಡ್, 6. ರೊಮಾರಿಯೊ ಶೆಫರ್ಡ್, 7. ರೋಸ್ಟನ್ ಚೇಸ್, 8. ಶಮರ್ ಸ್ಪ್ರಿಂಗರ್, 9. ಅಕೀಲ್ ಹುಸೇನ್, 10. ಶಮರ್ ಜೋಸೆಫ್, 11.ಮ್ಯಾಥ್ಯೂ ಫೋರ್ಡ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor