ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ | ಉತ್ತರ ಕನ್ನಡ ಸ್ಟಾಲಿಯನ್ಸ್ ಚಾಂಪಿಯನ್ : ಮಂಗಳೂರು ಇಂಡಿಯನ್ಸ್ ರನ್ನರ್-ಅಪ್
ಬೆಂಗಳೂರು: ಪ್ರೇಕ್ಷಕರನ್ನು ಕೊನೆಯವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ ರೋಚಕ ಫೈನಲ್ ಪಂದ್ಯದಲ್ಲಿ ಒಂದು ಅಂಕದಿಂದ ಮಂಗಳೂರು ಇಂಡಿಯನ್ಸ್ ತಂಡವನ್ನು ಮಣಿಸಿದ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡ 32-31 ಅಂಕಗಳಿಂದ ಮಂಗಳೂರು ತಂಡವನ್ನು ಸೋಲಿಸಿ 5 ಲಕ್ಷ ರೂ.ಬಹುಮಾನ ಮೊತ್ತವನ್ನು ತನ್ನದಾಗಿಸಿಕೊಂಡಿತು. ರನ್ನರ್-ಅಪ್ ಸ್ಥಾನ ಪಡೆದ ಮಂಗಳೂರು 3 ಲಕ್ಷ ರೂ.ವನ್ನು ತನ್ನದಾಗಿಸಿಕೊಂಡರೆ, ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ ಹಾಸನ ಮತ್ತು ಮೈಸೂರು ತಂಡಗಳು ತಲಾ 1 ಲಕ್ಷ ರೂ. ಬಹುಮಾನ ಪಡೆದವು.
ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಮೊದಲ 10 ನಿಮಿಷಗಳ ಆಟದಲ್ಲಿಯೇ ಸ್ಫೂರ್ತಿದಾಯಕ ಪ್ರದರ್ಶನ ನೀಡಿದ ಮಂಗಳೂರು ತಂಡ 10-3ರಲ್ಲಿ ಮೇಲುಗೈ ಸಾಧಿಸಿತು. ನಂತರ ಎದುರಾಳಿ ತಂಡವನ್ನು ಆಲೌಟ್ ಮಾಡಿ 14-11ರಲ್ಲಿ ಮುನ್ನಡೆ ವಿಸ್ತರಿಸಿಕೊಂಡ ಮಂಗಳೂರು ತಂಡವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿತು. ಈ ಮಧ್ಯೆ ಟ್ಯಾಕಲ್‌ನಲ್ಲಿ ಲಯ ಕಂಡುಕೊಂಡ ಉತ್ತರ ಕನ್ನಡದ ಆಟಗಾರರು ಪುಟಿದೆದ್ದರಲ್ಲದೆ, ವಿರಾಮದ ವೇಳೆ 15 -14 ರಿಂದ ಅಲ್ಪ ಮುನ್ನಡೆ ಸಾಧಿಸಿದರು.
ವಿಶ್ವಾಸದೊಂದಿಗೆ ಉಭಯ ತಂಡಗಳು ದ್ವಿತೀಯಾರ್ಧ ಆರಂಭಿಸಿದವು. ಎರಡೂ ತಂಡಗಳು ರಕ್ಷಣಾತ್ಮಕ ಆಟಕ್ಕೆ ಆದ್ಯತೆ ನೀಡಿದ ಕಾರಣ ನಿರೀಕ್ಷಿತ ಅಂಕ ಗಳಿಸಲು ತಿಣುಕಾಡಿದವು. ಇದರ ನಡುವೆಯೂ 32ನೇ ನಿಮಿಷದಲ್ಲಿ 23-21ರಲ್ಲಿ ಉತ್ತರ ಕನ್ನಡ ಮೇಲುಗೈ ಸಾಧಿಸಿತು. ಕೊನೆಯ ಐದು ನಿಮಿಷಗಳ ಆಟ ಎರಡೂ ತಂಡಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಯಿತು. ಉತ್ತರ ಕನ್ನಡ ತಂಡದ ಆಟಗಾರರು ಒತ್ತಡವನ್ನು ನಿಭಾಯಿಸುವ ಮೂಲಕ ಮುನ್ನಡೆಯ ಅಂತರವನ್ನು 27-24ಕ್ಕೆ ವಿಸ್ತರಿಸಿಕೊಂಡರು.
ಹಾಸನ, ಮೈಸೂರು ತಂಡಗಳಿಗೆ ನಿರಾಸೆ: ಮೂರು ಬಾರಿ ಆಲೌಟ್ ಸೇರಿ ಸಂಘಟಿತ ಹೋರಾಟ ಪ್ರದರ್ಶಿಸಿದ ಮಂಗಳೂರು ಇಂಡಿಯನ್ಸ್ ತಂಡ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹಾಸನ ತಂಡವನ್ನು 13 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಂಗಳೂರು ತಂಡ 43-30 ಅಂಕಗಳಿಂದ ಹಾಸನ ತಂಡವನ್ನು ಪರಾಭವಗೊಳಿಸಿತು. ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಚಾಲುಕ್ಯಸೇನೆ ಬಾಗಲಕೋಟೆ ತಂಡವನ್ನು 42-37 ಅಂಕಗಳಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಗಿಟ್ಟಿಸಿದ್ದ ಮಂಗಳೂರು ಇಂಡಿಯನ್ಸ್ ಆಟಗಾರರು ಉಪಾಂತ್ಯದಲ್ಲೂ ತಮ್ಮ ಸಂಘಟನಾತ್ಮಕ ಆಟವನ್ನು ನೀಡಿದರು. ಮೊದಲ ಬಾರಿ ಎರಡು ಬಾರಿ ಆಲೌಟ್ ಮಾಡಿದ ಮಂಗಳೂರು ತಂಡ ದ್ವಿತೀಯಾರ್ಧದಲ್ಲೂ ಒಮ್ಮೆ ಹಾಸನ ತಂಡವನ್ನು ಆಲೌಟ್ ಮಾಡಿ ಪ್ರಭುತ್ವ ಸಾಧಿಸಿತು.
ಟೂರ್ನಿಯ ಆರಂಭದಿಂದಲೂ ಸ್ಥಿರ ಹಾಗೂ ಅಧಿಕಾರಯುತ ಪ್ರದರ್ಶನ ನೀಡಿದ ಹಾಸನ ಮಹತ್ವದ ಪಂದ್ಯದಲ್ಲಿ ಎಡವಿತು. ಅದರಲ್ಲೂ ಲೀಗ್‌ನಲ್ಲಿ 100ಕ್ಕೂ ಅಧಿಕ ರೇಡಿಂಗ್ ಪಾಯಿಂಟ್ಸ್ ಕಲೆ ಹಾಕಿರುವ ಗಗನ್ ಗೌಡ ನಿರ್ಣಾಯಕ ಪಂದ್ಯದಲ್ಲಿ ವಿಫಲಗೊಂಡಿದ್ದು, ತಂಡದ ಸೋಲಿಗೆ ಕಾರಣವಾಯಿತು. ರೇಡಿಂಗ್ ಮತ್ತು ರಕ್ಷಣೆ ವಿಭಾಗದಲ್ಲಿ ಸಂಪೂರ್ಣ ನಿರಾಸೆ ಅನುಭವಿಸಿದ ಹಾಸನ್ ತಂಡ 15 ಬೋನಸ್ ಅಂಕಗಳಿಗೆ ಸೀಮಿತಗೊಂಡಿತು.
ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ 2ನೇ ಸೆಮಿಫೈನಲ್‌ನಲ್ಲಿ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡ 33-31 ಅಂಕಗಳ ಅಂತರದಿಂದ ಮೈಸೂರು ಮಹಾಸೇನೆ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಪೂರ್ವಾರ್ಧಕ್ಕೆ 19-10ರಿಂದ ಸ್ಪಷ್ಟ ಮುನ್ನಡೆ ಸಾಧಿಸಿದ್ದ ಮೈಸೂರು ತಂಡ ದ್ವಿತೀಯಾರ್ಧದಲ್ಲಿ ಸಮನ್ವತೆ ಕೊರತೆ ಎದುರಿಸಿತು. ಎರಡು ಬಾರಿ ಆಲೌಟ್ ಆಗಿದ್ದು ಇದಕ್ಕೆ ಸ್ಪಷ್ಟ ನಿದರ್ಶನ. ಇದರ ನಡುವೆಯೂ ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿರುವಾಗ ಮೈಸೂರು ತಂಡ ಪುಟಿದೇಳುವ ಯತ್ನ ಮಾಡಿತು. ಆದರೆ ಅಂತಿಮ ಕ್ಷಣದ ಒತ್ತಡವನ್ನು ಮೆಟ್ಟಿ ನಿಂತ ಉತ್ತರ ಕನ್ನಡ ತಂಡದ ಆಟಗಾರರು ಎರಡು ಅಂಕಗಳ ಅಂತರದಿಂದ ಗೆದ್ದು ವಿಜಯೋತ್ಸವ ಆಚರಿಸಿದರು.