"ಲಿಯೋ, ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ": ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ ಮೆಸ್ಸಿಗೆ ರೊನಾಲ್ಡೊ ಶ್ಲಾಘನೆ
ಮೆಸ್ಸಿ | ರೊನಾಲ್ಡೊ (Photos: PTI)
ಹೊಸದಿಲ್ಲಿ : ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರು ಮಂಗಳವಾರ ಬ್ಯೂನಸ್ ಐರಿಸ್‌ನಲ್ಲಿ ಬೆನಿನ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅರ್ಜೆಂಟೀನಾ ಪರ ತಮ್ಮ 21 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ವಿದಾಯ ಹೇಳಿದರು.
ಮೆಸ್ಸಿ ಅವರಿಗೆ ವಿದಾಯದ ಬಳಿಕ ಹಲವರು ಅಭಿನಂದಿಸಿದ್ದಾರೆ. ಅವರಲ್ಲಿ ಅವರ ಬಹುಕಾಲದ ಪ್ರತಿಸ್ಪರ್ಧಿ ಕ್ರಿಸ್ಟಿಯಾನೊ ರೊನಾಲ್ಡೊ ಪ್ರಮುಖರಾಗಿದ್ದಾರೆ.
ಫುಟ್ಬಾಲ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಮೆಸ್ಸಿ ಜೊತೆ ಪೈಪೋಟಿ ನಡೆಸಿದ್ದ ಪೋರ್ಚುಗಲ್‌ನ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ, ಮೆಸ್ಸಿ ಅವರ ವಿದಾಯದ ಸಂದರ್ಭದಲ್ಲಿ ಗೌರವ ಸಲ್ಲಿಸಿದ್ದಾರೆ.
“ಲಿಯೋ, ನೀವು ಹಲವು ವರ್ಷಗಳಿಂದ ನಿಮ್ಮ ದೇಶವನ್ನು ಪ್ರತಿನಿಧಿಸುತ್ತಾ ಬಂದಿದ್ದೀರಿ. ನಿಮ್ಮ ಸಾಧನೆಗಳು ಎಂದೆಂದಿಗೂ ಉಳಿಯುವಂತಹ ಇತಿಹಾಸವನ್ನು ಸೃಷ್ಟಿಸಿವೆ. ಅರ್ಜೆಂಟೀನಾ ಪರ ನೀವು ಸಾಧಿಸಿರುವ ಎಲ್ಲಾ ಸಾಧನೆಯನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ” ಎಂದು ಕ್ರಿಸ್ಟಿಯಾನೊ ರೊನಾಲ್ಡೊ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳುವ ವೇಳೆ ಅರ್ಜೆಂಟಿನಾ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಸಾಧನೆ ಮಾಡಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅವರು ಅರ್ಜೆಂಟಿನಾ ಪರ 208 ಪಂದ್ಯಗಳಲ್ಲಿ 126 ಗೋಲುಗಳನ್ನು ಗಳಿಸಿದ್ದಾರೆ. ಇವು ಅರ್ಜೆಂಟೀನಾ ಪರ ದಾಖಲೆಗಳಾಗಿವೆ.