×
Ad

ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 | ಲಾಹೋರ್ನ ಕ್ರೀಡಾಂಗಣ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಸಜ್ಜಾಗಿದೆ: ಪಿಸಿಬಿ

Update: 2025-02-06 23:35 IST

Photo - X

ಲಾಹೋರ್: ಲಾಹೋರ್ನ ಗದ್ದಾಫಿ ಕ್ರೀಡಾಂಗಣದ ನವೀಕರಣ ಹಾಗೂ ಮೇಲ್ದರ್ಜೆಗೇರಿಸುವ ಕಾರ್ಯವು 117 ದಿನಗಳ ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿದ್ದು, ಈಗ ಅದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಿದ್ಧವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗುರುವಾರ ಪ್ರಕಟಿಸಿದೆ.

ಹೊಸ ರೂಪ ಪಡೆದಿರುವ ಕ್ರೀಡಾಂಗಣದಲ್ಲಿ ಈಗ ಉತ್ತಮ ಸೌಲಭ್ಯಗಳು, ಹೊಸ ಫ್ಲಡ್ಲೈಟ್ ಗಳು, ಹಾಸ್ಪಿಟಾಲಿಟಿ ಬಾಕ್ಸ್ಗಳು, ಹೆಚ್ಚಿನ ಆಸನ ಸಾಮರ್ಥ್ಯಗಳು, ಎಲೆಕ್ಟ್ರಾನಿಕ್ ಸ್ಕೋರ್ಬೋರ್ಡ್ಗಳು ಹಾಗೂ ಉನ್ನತ ಮಟ್ಟದ ಎಲ್ಇಡಿ ಟವರ್ಗಳು ಇವೆ ಎಂದು ಪಿಸಿಬಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಆತಂಕಗಳು ಹಾಗೂ ಟೀಕೆಗಳ ಹೊರತಾಗಿಯೂ ಕ್ರೀಡಾಂಗಣವನ್ನು ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಲು ಹಗಲಿರುಳು ಶ್ರಮಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಈ ಕನಸನ್ನು ಸಾಧ್ಯವಾಗಿಸಿದ ಸುಮಾರು 1,000 ಕಾರ್ಮಿಕರಿಗೆ ನಾನು ವಿಶೇಷವಾಗಿ ಋಣಿಯಾಗಿದ್ದೇನೆ’’ ಎಂದು ಪಿಸಿಬಿ ಮುಖ್ಯಸ್ಥ ಮುಹ್ಸಿನ್ ನಖ್ವಿ ಹೇಳಿದ್ದಾರೆ.

ಪಾಕಿಸ್ತಾನದ ಕ್ರೀಡಾಂಗಣಗಳ ಕಾಮಗಾರಿಗಳು ನಿಧಾನವಾಗಿ ನಡೆಯುತ್ತಿದ್ದು, ಅದು ವಿಳಂಬವಾಗಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಪಿಸಿಬಿ, ಪಂದ್ಯಾವಳಿ ಆರಂಭವಾಗಲು ಒಂದು ವಾರ ಮೊದಲು ಫೆ.12ರಂದು ಸ್ಟೇಡಿಯಮ್ಗಳನ್ನು ಐಸಿಸಿಗೆ ಹಸ್ತಾಂತರಿಸುವ ಅಗತ್ಯವಿದೆ.

ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ತ್ರಿಕೋನ ಸರಣಿಯ ಮೊದಲ ಪಂದ್ಯವನ್ನು ಫೆಬ್ರವರಿ 8ರಂದು ಆಡಲಿದ್ದು, ಆ ದಿನ ಹೊಸ ಕ್ರೀಡಾಂಗಣವು ಪರೀಕ್ಷೆಗೆ ಒಳಪಡಲಿದೆ.

ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿರುವ ಮೂರು ಕ್ರೀಡಾಂಗಣಗಳ ಮೇಲ್ದರ್ಜೆಗೇರಿಸಲು ನಿಗದಿಪಡಿಸಿದ ಬಜೆಟ್ ಆರಂಭಿಕ ಅಂದಾಜನ್ನು ಮೀರಿದೆ ಎಂದು ಒಪ್ಪಿಕೊಂಡ ನಖ್ವಿ, ಆದರೆ ಹೊಸ ಅತ್ಯಾಧುನಿಕ ಸ್ಟೇಡಿಯಮ್ಗಳು ಭವಿಷ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ಗೆ ಉತ್ತಮ ಸೇವೆ ನೀಡುತ್ತವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News