ಹಲವು ವರ್ಷಗಳ ಕಾಯುವಿಕೆಯ ನಂತರ ಐಸಿಸಿ ಟ್ರೋಫಿ ಗೆದ್ದ ದಕ್ಷಿಣ ಆಫ್ರಿಕಾ
PC : PTI
ಲಾರ್ಡ್ಸ್: ಸುಮಾರು 27 ವರ್ಷಗಳ ಸತತ ವೈಫಲ್ಯದ ನಂತರ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಕೊನೆಗೂ ಐಸಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ನಾಯಕ ಟೆಂಬಾ ಬವುಮಾ ಅವರು (36, 66 ರನ್) ಬ್ಯಾಟಿಂಗ್‌ನಲ್ಲೂ ಮಿಂಚಿ ಪ್ರಶಸ್ತಿ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ದಕ್ಷಿಣ ಆಫ್ರಿಕಾ ತಂಡವು ಪ್ರತೀ ಬಾರಿಯು ಪ್ರಶಸ್ತಿ ಗೆಲುವಿನ ಸನಿಹ ತಲುಪಿ ಕೊನೆಯ ಕ್ಷಣದಲ್ಲಿ ಎಡವಿ ಬೀಳುತ್ತಿತ್ತು. ಅಂತಹ ಪಂದ್ಯಗಳತ್ತ ಒಂದು ಕಿರು ನೋಟ ಇಲ್ಲಿದೆ.
1. 1992ರ ವಿಶ್ವಕಪ್ ಸೆಮಿ ಫೈನಲ್: ವಿಚಿತ್ರವಾದ ಮಳೆ ನಿಯಮದಿಂದಾಗಿ ಕೆಪ್ಲರ್ ವೆಸೆಲ್ಸ್ ತಂಡವು ಪಂದ್ಯಾವಳಿಯಿಂದ ಹೊರಬಿದ್ದಿತ್ತು. ನಿಯಮದಿಂದಾಗಿ ಆಫ್ರಿಕಾ ತಂಡವು ಗೆಲ್ಲಲು 1 ಎಸೆತದಲ್ಲಿ 22 ರನ್ ಗಳಿಸಬೇಕಾಗಿತ್ತು. ಆಫ್ರಿಕಾ ತಂಡ 253 ರನ್ ಚೇಸ್ ಮಾಡುತ್ತಿದ್ದಾಗ 13 ಎಸೆತಗಳಲ್ಲಿ 22 ರನ್ ಅಗತ್ಯವಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಗೆಲುವಿನ ವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿತ್ತು. ಆಫ್ರಿಕಾದ ಚೊಚ್ಚಲ ವಿಶ್ವಕಪ್ ಅಭಿಯಾನ ನಿರಾಶಾದಾಯಕವಾಗಿ ಅಂತ್ಯ ಕಂಡಿತ್ತು.
2. 1999ರ ಸೆಮಿ ಫೈನಲ್: ಆಸ್ಟ್ರೇಲಿಯ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ ಸೆಮಿ ಫೈನಲ್ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ ಕೇವಲ 1 ರನ್ ಅಗತ್ಯವಿತ್ತು. ಒಂದು ವಿಕೆಟ್ ಕೈಯ್ಯಲ್ಲಿತ್ತು. ಲ್ಯಾನ್ಸ್ ಕ್ಲೂಸ್ನೆರ್(ಔಟಾಗದೆ 31, 16 ಎಸೆತ)ತನ್ನ ತಂಡವನ್ನು ಫೈನಲ್ ಗೆ ತಲುಪಿಸುವ ವಿಶ್ವಾಸದಲ್ಲಿದ್ದರು. ದುರದೃಷ್ಟವಶಾತ್ ಅಲನ್ ಡೊನಾಲ್ಡ್(0)ರನೌಟ್ ಆದ ಕಾರಣ ಪಂದ್ಯ ಟೈ ಆಯಿತು. ಸೂಪರ್ ಸಿಕ್ಸ್ ಹಂತದಲ್ಲಿ ಆಫ್ರಿಕಾಕ್ಕಿಂತ ಮೇಲಿದ್ದ ಆಸ್ಟ್ರೇಲಿಯ ತಂಡವು ಫೈನಲ್ ಗೆ ಪ್ರವೇಶಿಸಿತು.
3. 2015 ರ ವಿಶ್ವಕಪ್ ಸೆಮಿ ಫೈನಲ್: ಮಳೆ ಬಾಧಿತ 43 ಓವರ್ ಗಳಿಗೆ ಕಡಿತಗೊಂಡಿದ್ದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌ಗೆ 298 ರನ್ ಗುರಿ ನಿಗದಿಪಡಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಚೊಚ್ಚಲ ವಿಶ್ವಕಪ್ ಫೈನಲ್ ತಲುಪುವ ಅವಕಾಶ ಹೊಂದಿತ್ತು. ಆದರೆ ಆಫ್ರಿಕಾದ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಬ್ರೆಂಡನ್ ಮೆಕಲಮ್(59 ರನ್), ಕೋರಿ ಆ್ಯಂಡರ್ಸನ್(58 ರನ್)ಹಾಗೂ ಗ್ರ್ಯಾಂಟ್ ಎಲಿಯಟ್(ಔಟಾಗದೆ 84)ಕಿವೀಸ್ ತಂಡವನ್ನು ಫೈನಲ್ ಗೆ ತಲುಪಿಸಿದರು.
4. 2023ರ ಏಕದಿನ ವಿಶ್ವಕಪ್ ಸೆಮಿ ಫೈನಲ್: ಡೇವಿಡ್ ಮಿಲ್ಲರ್ ಶತಕದ ಬಲದಿಂದ ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ದ.ಆಫ್ರಿಕಾ 212 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಬೌಲರ್ ಗಳು ಆಸ್ಟ್ರೇಲಿಯದ ಕುಸಿತಕ್ಕೆ ಕಾರಣರಾದರು. ಮಿಚೆಲ್ ಸ್ಟಾರ್ಕ್(16)ಹಾಗೂ ಪ್ಯಾಟ್ ಕಮಿನ್ಸ್(14)ಅಜೇಯವಾಗುಳಿದು ಆಸ್ಟ್ರೇಲಿಯಕ್ಕೆ ಜಯ ತಂದುಕೊಟ್ಟರು.
5. 2024ರ ಟಿ-20 ವಿಶ್ವಕಪ್ ಫೈನಲ್: ಗೆಲ್ಲಲು ಕೊನೆಯ 28 ಎಸೆತಗಳಲ್ಲಿ 27 ರನ್ ಅಗತ್ಯವಿದ್ದಾಗ ಹೆನ್ರಿಕ್ ಕ್ಲಾಸೆನ್ ಭಾರತೀಯ ಬೌಲಿಂಗ್ ದಾಳಿಯನ್ನು ಪುಡಿಗಟ್ಟುತ್ತಿದ್ದಾಗ ದಕ್ಷಿಣ ಆಫ್ರಿಕಾ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿತ್ತು. ಜಸ್‌ಪ್ರಿತ್ ಬುಮ್ರಾ ನೇತೃತ್ವದಲ್ಲಿ ಪುಟಿದೆದ್ದ ಭಾರತೀಯ ಬೌಲರ್ ಗಳು ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸಿ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಿದರು.