ಭಾರತ-ವಿಂಡೀಸ್ ಟೆಸ್ಟ್ : ಗುರುವಾರ ಮೊದಲ ಪಂದ್ಯ
ಅಹ್ಮದಾಬಾದ್, ಸೆ. 30: ಭಾರತ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಅಹ್ಮದಾಬಾದ್‌ನಲ್ಲಿ ಗುರುವಾರ ಆರಂಭವಾಗಲಿದೆ.
ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಎರಡು ಟೆಸ್ಟ್‌ಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫೇವರಿಟ್ ಆಗಿದೆ. ಒಂದು ಕಾಲದಲ್ಲಿ ಕ್ರಿಕೆಟ್‌ನ ದೊಡ್ಡ ಶಕ್ತಿಯಾಗಿದ್ದ ವೆಸ್ಟ್ ಇಂಡೀಸ್ ಈಗ ದುರ್ಬಲವಾಗಿದೆ. ಗಾಯದ ಸಮಸ್ಯೆಗಳಿಂದ ಬಳಲುತ್ತಿರುವ ವೆಸ್ಟ್ ಇಂಡೀಸ್ ಹಲವಾರು ವರ್ಷಗಳಿಂದ ಕುಸಿತದ ದಾರಿಯಲ್ಲಿ ಸಾಗಿದೆ. ಅದರ ಟಿ20 ತಂಡವಂತೂ ಇತ್ತೀಚೆಗೆ ಟೆಸ್ಟ್ ಆಡದ ನೇಪಾಳದ ವಿರುದ್ಧ ಸರಣಿ ಸೋತು ಹೊಸ ಕನಿಷ್ಠ ಮಟ್ಟ ತಲುಪಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ವರ್ಷ ಅದು ಆಸ್ಟ್ರೇಲಿಯ ವಿರುದ್ಧ 3-0 ಅಂತರದಿಂದ ಸೋತಿದೆ. ಸ್ವದೇಶದಲ್ಲಿ ನಡೆದ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಅದು ಕೇವಲ 27 ರನ್‌ಗೆ ಆಲೌಟ್ ಆಯಿತು. ಇದು ಟೆಸ್ಟ್ ಇತಿಹಾಸದ ಎರಡನೇ ಕನಿಷ್ಠ ಮೊತ್ತವಾಗಿದೆ.
ರಾಸ್ಟನ್ ಚೇಸ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡವು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಕೊನೆಯ ಕ್ಷಣಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ವೇಗಿಗಳಾದ ಅಲ್ಝಾರಿ ಜೋಸೆಫ್ ಮತ್ತು ಶಮರ್ ಜೋಸೆಫ್ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ.
ಅವರ ಬದಲಿಗೆ ರಾಷ್ಟ್ರೀಯ ತಂಡದಲ್ಲಿ ಈವರೆಗೆ ಆಡದ ಜೊಹಾನ್ ಲೇನ್ ಮತ್ತು ಎಡಗೈ ವೇಗಿ ಜೆಡಿಯಾ ಬ್ಲೇಡ್ಸ್ರನ್ನು ತಂಡಕ್ಕೆ ಸೇರಿಸಲಾಗಿದೆ. ಬ್ಲೇಡ್ಸ್ ಈವರೆಗೆ ವೆಸ್ಟ್ ಇಂಡೀಸ್ ಪರವಾಗಿ ಏಕದಿನ ಮತ್ತು ಟಿ20 ಕ್ರಿಕೆಟ್ ಮಾತ್ರ ಆಡಿದ್ದಾರೆ. ಜೇಡನ್ ಸೀಲ್ಸ್ 10ಕ್ಕಿಂತ ಹೆಚ್ಚು ಟೆಸ್ಟ್‌ಗಳನ್ನು ಆಡಿರುವ ಏಕೈಕ ವೇಗಿಯಾಗಿದ್ದಾರೆ.
ಇನ್ನು ಭಾರತ ತಂಡ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಐದು ಟೆಸ್ಟ್‌ಗಳ ಸರಣಿಯಲ್ಲಿ 2-2 ರಿಂದ ಡ್ರಾ ಸಾಧಿಸಿ ಆತ್ಮವಿಶ್ವಾಸದಲ್ಲಿದೆ. ಗಿಲ್‌ಗೆ ಇದು ನಾಯಕತ್ವದ ಮೊದಲ ಸರಣಿಯಾಗಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ನಿವೃತ್ತರಾದ ನಂತರ ಭಾರತ ಆಡಿರುವ ಮೊದಲ ಸರಣಿ ಅದಾಗಿತ್ತು.
ಗಿಲ್ ವೈಯಕ್ತಿಕವಾಗಿ ಇಂಗ್ಲೆಂಡ್‌ನಲ್ಲಿ 754 ರನ್ ಗಳಿಸಿದರು. ಇದು ಭಾರತೀಯ ಬ್ಯಾಟರ್ ಒಬ್ಬರು ಇಂಗ್ಲೆಂಡ್‌ನಲ್ಲಿ ಗಳಿಸಿದ ಗರಿಷ್ಠ ರನ್ ಆಗಿದೆ.
ವೇಗಿ ಜಸ್ಪ್ರೀತ್ ಬುಮ್ರಾ ದುಬೈನಲ್ಲಿ ಭಾನುವಾರ ನಡೆದ ಟಿ20 ಏಷ್ಯ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಎರಡು ವಿಕೆಟ್ ಪಡೆದ ನಂತರ ಟೆಸ್ಟ್‌ಗೆ ಮರಳುತ್ತಿದ್ದಾರೆ. ಈ ವರ್ಷ ಆಸ್ಟ್ರೇಲಿಯದಲ್ಲಿ ಗಾಯಗೊಂಡ ನಂತರ ಬುಮ್ರಾರ ಕೆಲಸದ ಒತ್ತಡವನ್ನು ಎಚ್ಚರಿಕೆಯಿಂದ ನಿಭಾಯಿಸಲಾಗುತ್ತಿದೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಪೈಕಿ ಎರಡರಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆ ಸರಣಿಯಲ್ಲಿ ಮುಹಮ್ಮದ್ ಸಿರಾಜ್ 23 ವಿಕೆಟ್‌ಗಳನ್ನು ಪಡೆದು ಮಿಂಚಿದರು.
ವೆಸ್ಟ್ ಇಂಡೀಸ್‌ನ ಸ್ಪಿನ್ ವಿಭಾಗದಲ್ಲಿ ಚೇಸ್‌ಗೆ ಜೊಮೆಲ್ ವಾರಿಕನ್ ಮತ್ತು ಖಾರಿ ಪಿಯರ್ ಸಾಥ್ ನೀಡಲಿದ್ದಾರೆ. ಪಿಯರ್ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದಾರೆ.
ಎರಡನೇ ಮತ್ತು ಅಂತಿಮ ಟೆಸ್ಟ್ ಅಕ್ಟೋಬರ್ 10ರಂದು ಹೊಸದಿಲ್ಲಿಯಲ್ಲಿ ಆರಂಭಗೊಳ್ಳಲಿದೆ.
ಆಟ ಆರಂಭ: ಗುರುವಾರ ಬೆಳಗ್ಗೆ 9:30
ತಂಡಗಳು
ಭಾರತ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್, ಧ್ರುವ ಜುರೆಲ್, ರವೀಂದ್ರ ಜಡೇಜ, ಮುಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ವಾಶಿಂಗ್ಟನ್ ಸುಂದರ್, ಕುಲದೀಪ್ ಯಾದವ್, ನಿತೀಶ್ ರೆಡ್ಡಿ, ಪ್ರಸಿದ್ಧ ಕೃಷ್ಣ, ಅಕ್ಷರ್ ಪಟೇಲ್, ಎನ್. ಜಗದೀಶನ್.
ವೆಸ್ಟ್ ಇಂಡೀಸ್: ರಾಸ್ಟನ್ ಚೇಸ್ (ನಾಯಕ), ಕೆವ್ಲನ್ ಆ್ಯಂಡರ್ಸನ್, ಆ್ಯಲಿಕ್ ಆ್ಯತನೇಝ್, ಜಾನ್ ಕ್ಯಾಂಬೆಲ್, ತಗೆನರಿನ್ ಚಂದ್ರಪಾಲ್, ಜಸ್ಟಿನ್ ಗ್ರೀವ್ಸ್, ಶಾಯ್ ಹೋಪ್, ಟೆವಿನ್ ಇಮ್ಲಾಚ್, ಜೊಹಾನ್ ಲೇನ್, ಜೆಡಿಯ ಬ್ಲೇಡ್ಸ್, ಬ್ರಾಂಡನ್ ಕಿಂಗ್, ಆ್ಯಂಡರ್ಸನ್ ಫಿಲಿಪ್, ಖಾರಿ ಪಿಯರ್, ಜೇಡನ್ ಸೀಲ್ಸ್, ಜೊಮೆಲ್ ವಾರಿಕನ್.