×
Ad

ನಾಳೆ ಭಾರತ-ಆಸಿಸ್ 2ನೇ ಟಿ20 ; ರನ್ ಹರಿವನ್ನು ನಿಯಂತ್ರಿಸುವತ್ತ ಬೌಲರ್ ಗಳ ಗಮನ

Update: 2023-11-25 21:40 IST

Photo- PTI

ತಿರುವನಂತಪುರಂ : ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ದ್ವಿಪಕ್ಷೀಯ ಟ್ವೆಂಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ಎರಡನೇ ಪಂದ್ಯ ತಿರುವನಂತಪುರಂನ ಗ್ರೀನ್ಫೀಲ್ಡ್ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ರವಿವಾರ ನಡೆಯಲಿದೆ.

ಎರಡು ದಿನಗಳ ಹಿಂದೆ ವಿಶಾಖಪಟ್ಟಣಮ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿರುವ ಭಾರತೀಯ ಯುವ ಬೌಲಿಂಗ್ ಪಡೆ, ಬಲಿಷ್ಠ ಆಸ್ಟ್ರೇಲಿಯ ಬ್ಯಾಟಿಂಗ್ ಸರದಿಯನ್ನು ಎದುರಿಸಲು ಮತ್ತೊಮ್ಮೆ ಸಜ್ಜಾಗುತ್ತಿದೆ. ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಗಳ ರೋಚಕ ಜಯವನ್ನು ಭಾರತ ಸಂಪಾದಿಸಿತು. ವೇಗಿ ಮುಕೇಶ್ ಕುಮಾರ್ ರನ್ನು ಹೊರತುಪಡಿಸಿ ಇತರ ಬೌಲರ್ ಗಳು ರನ್ ಹರಿವನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದರು.

ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ 200 ರನ್ ಗಳ ಗಡಿಯನ್ನು ದಾಟಿದ್ದವು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ 20 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 208 ರನ್ ಗಳನ್ನು ಕಲೆ ಹಾಕಿತು. ಜೋಶ್ ಇಂಗ್ಲಿಸ್ ತನ್ನ ಮೊದಲ ಟಿ20 ಅಂತರ್ರಾಷ್ಟ್ರೀಯ ಶತಕವನ್ನು ಬಾರಿಸಿದರು. ಅವರು 50 ಎಸೆತಗಳಲ್ಲಿ 110 ರನ್ ಗಳನ್ನು ಸಿಡಿಸಿದರು. ಅದಕ್ಕೆ ಪ್ರತಿಯಾಗಿ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ 42 ಎಸೆತಗಳಲ್ಲಿ 80 ರನ್ ಗಳನ್ನು ಸಿಡಿಸಿದರು. ಇಶಾನ್ ಕಿಶನ್ ಅರ್ಧ ಶತಕವೊಂದನ್ನು ಬಾರಿಸಿದರು. ರಿಂಕು ಸಿಂಗ್ ಇನಿಂಗ್ಸ್ ಗೆ ಉತ್ತಮ ಕೊನೆ ನೀಡಿದರು.

ಐದು ಪಂದ್ಯಗಳ ಸರಣಿಯ ಎರಡನೇ ಪಂದ್ಯ ನಡೆಯುತ್ತಿರುವ ಇಲ್ಲಿನ ಗ್ರೀನ್ಫೀಲ್ಡ್ ನ್ಯಾಶನಲ್ ಸ್ಟೇಡಿಯಮ್ನ ಪರಿಸ್ಥಿತಿಗಳೂ ವಿಶಾಖಪಟ್ಟಣಂ ನಲ್ಲಿದ್ದ ಪರಿಸ್ಥಿತಿಗಿಂತ ಹೆಚ್ಚೇನೂ ಭಿನ್ನವಾಗಿಲ್ಲ. ಹಾಗಾಗಿ, ಬೌಲಿಂಗ್ ದಾಳಿಯನ್ನು ಮತ್ತಷ್ಟು ಮೊನಚುಗೊಳಿಸಲು ಸಂಘಟಿತ ಪ್ರಯತ್ನಗಳನ್ನು ನಡೆಸಬೇಕಾದ ಒತ್ತಡ ಭಾರತೀಯ ಬೌಲರ್ ಗಳ ಮೇಲಿದೆ.

ಹಿಂದಿನ ಪಂದ್ಯದಲ್ಲಿ ವೇಗಿಗಳಾದ ಅರ್ಶ್ದೀಪ್ ಸಿಂಗ್ ಮತ್ತು ಪಸಿದ್ಧ ಕೃಷ್ಣ ಹಾಗೂ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಸಮಸ್ಯೆಗಳನ್ನು ಎದುರಿಸಿದ್ದರು. ಅವರು ಹೆಚ್ಚು ರನ್ ಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಮುಕೇಶ್ ಕುಮಾರ್ ತನ್ನ ಎಸೆತಗಳಲ್ಲಿ ವೈವಿಧ್ಯತೆ ಮತ್ತು ಅಚ್ಚರಿಗಳನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅವರ ಆ ಪ್ರಯತ್ನವು ಇತರ ಬೌಲರ್ ಗಳಿಗೆ ಮಾದರಿಯಾಗಿದೆ.

ಮುಖ್ಯವಾಗಿ ಬಿಷ್ಣೋಯ್, ಜೋಶ್ ಇಂಗ್ಲಿಸ್ ರ ಆಕ್ರಮಣಕಾರಿ ಬ್ಯಾಟಿಂಗನ್ನು ನಿಭಾಯಿಸುವಲ್ಲಿ ಎಡವಿದ್ದರು. ಎದುರಾಳಿ ಬ್ಯಾಟರ್ ಗಳನ್ನು ಅಚ್ಚರಿಯಲ್ಲಿಡಲು ಬಿಷ್ಣೋಯ್ ತನ್ನ ಬೌಲಿಂಗ್ ನಲ್ಲಿ ವೆವಿಧ್ಯತೆಯನ್ನು ತರುವುದು ಅಗತ್ಯವಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡಿರುವ ಐಸಿಸಿ ವಿಶ್ವಕಪ್ ನಲ್ಲಿ ಆಡಿ ಬಂದಿರುವ ಪ್ರಸಿದ್ಧ ಕೃಷ್ಣ ತನ್ನ ಬೌಲಿಂಗ್ ನಿರ್ವಹಣೆಯನ್ನು ಹೆಚ್ಚಿಸಬೇಕಾಗಿದೆ.

ಬ್ಯಾಟಿಂಗ್ ವಿಭಾಗದಲ್ಲಿ, ಭಾರತದ ಅಗ್ರ ಕ್ರಮಾಂಕದ ಬ್ಯಾಟರುಗಳಾದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ರಿಂಕು ಸಿಂಗ್ ಮತ್ತು ಯಶಸ್ವಿ ಜೈಸ್ವಾಲ್ ಆಸ್ಟ್ರೇಲಿಯ ವಿರುದ್ಧ ಮೊದಲ ಪಂದ್ಯದಲ್ಲಿ ಉತ್ತಮ ನಿರ್ವಹಣೆಯನ್ನೇ ನೀಡಿದ್ದಾರೆ. ಇದೇ ಗತಿಯನ್ನು ಮುಂದುವರಿಸಿಕೊಂಡು ಹೋಗುವ ಉಮೇದಿನಲ್ಲಿ ಅವರಿದ್ದಾರೆ. ಅದೇ ವೇಳೆ, ಡಾಟ್ ಬಾಲ್ ಗಳ ಸಂಖ್ಯೆಯನ್ನು ಕಡಿಮೆ ಮಾಡುವತ್ತ ಕಿಶನ್ ಗಮನ ಹರಿಸಬೇಕಾದ ಅಗತ್ಯವಿದೆ.

ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದ ಪರವಾಗಿ ಜೋಶ್ ಇಂಗ್ಲಿಸ್ ಬಾರಿಸಿದ ಶತಕವು ಆ ತಂಡದ ಮನೋಬಲವನ್ನು ವೃದ್ಧಿಸಿತು. ಅವರು ಆರಂಭಿಕ ಬ್ಯಾಟರ್ ಆಗಿ ಈ ಸಾಧನೆಯನ್ನು ಮಾಡಿದರು. ಆದರೆ ಆರಂಭಿಕನಾಗಿ ಸ್ಟೀವ್ ಸ್ಮಿತ್ ಗೆ ನೀಡಿರುವ ಭಡ್ತಿಯು ನಿರೀಕ್ಷಿತ ಫಲ ನೀಡಲಿಲ್ಲ.

ಎರಡೂ ತಂಡಗಳು ತಮ್ಮ ಬೌಲಿಂಗ್ ಘಟಕಗಳ ಸುಧಾರಣೆಗೆ ಗಮನ ನೀಡಲಿವೆ. ಆಸ್ಟ್ರೇಲಿಯವು ತನ್ವೀರ್ ಸಂಘ ಸ್ಥಾನದಲ್ಲಿ ಲೆಗ್ಸ್ಪಿನ್ನರ್ ಆ್ಯಡಮ್ ಝಾಂಪ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.

ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ),ಲ ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ (ವಿಕೆಟ್ಕೀಪರ್), ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಮ್ ದುಬೆ, ರವಿ ಬಿಷ್ಣೋಯ್, ಅರ್ಶದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್ ಮತ್ತು ಮುಕೇಶ್ ಕುಮಾರ್.

ಆಸ್ಟ್ರೇಲಿಯ: ಮ್ಯಾಥ್ಯೂ ವೇಡ್ (ನಾಯಕ), ಆರೋನ್ ಹಾಡೀ, ಜಾಸನ್ ಬೆಹ್ರನ್ಡಾರ್ಫ್, ಶಾನ್ ಅಬಾಟ್, ಟಿಮ್ ಡೇವಿಡ್, ನತಾನ್ ಎಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್, ಕೇನ್ ರಿಚಡ್ರ್ಸನ್ ಮತ್ತು ಆ್ಯಡಮ್ ಝಾಂಪ.

ಸ್ಥಳ: ಗ್ರೀನ್ಫೀಲ್ಡ್ ಇಂಟರ್ನ್ಯಾಶನಲ್ ಸ್ಟೇಡಿಯಮ್, ತಿರುವನಂತಪುರಂ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News