×
Ad

ಬುಧವಾರ ಭಾರತ-ಐರ್ಲ್ಯಾಂಡ್ 3ನೇ ಟಿ20

Update: 2023-08-22 21:37 IST

ಡಬ್ಲಿನ್, ಆ. 22: ಪ್ರವಾಸಿ ಭಾರತ ಮತ್ತು ಆತಿಥೇಯ ಐರ್ಲ್ಯಾಂಡ್ ನಡುವಿನ ಟ್ವೆಂಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವು ಬುಧವಾರ ಡಬ್ಲಿನ್ನಲ್ಲಿ ನಡೆಯಲಿದೆ. ಈಗಾಗಲೇ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತವು ಸರಣಿಯನ್ನು ಜಯಿಸಿದೆ. ಹಾಗಾಗಿ, ಕೊನೆಯ ಪಂದ್ಯವನ್ನೂ ಗೆದ್ದು ಸರಣಿಯನ್ನು ಕ್ಲೀನ್ಸ್ವೀಪ್ ಮಾಡುವತ್ತ ಭಾರತ ಮುಂದಾಗಿದೆ.

ಗಾಯಗೊಂಡು ಹನ್ನೊಂದು ತಿಂಗಳುಗಳ ಕಾಲ ತಂಡದಿಂದ ಹೊರಗಿದ್ದು, ಹಾಲಿ ಸರಣಿಗೆ ಭಾರತ ತಂಡಕ್ಕೆ ನಾಯಕನ ಪಾತ್ರದೊಂದಿಗೆ ಮರಳಿರುವ ಜಸ್ಪ್ರೀತ್ ಬುಮ್ರಾ ಉತ್ತಮ ನಿರ್ವಹಣೆಯನ್ನೇ ನೀಡಿದ್ದಾರೆ. ಹಾಗಾಗಿ, ಈಗ ಅವರು ಏಶ್ಯ ಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಜೊತೆಗೆ ತಂಡದ ಮೀಸಲು ಆಟಗಾರರ ಸಾಮಥ್ರ್ಯವನ್ನು ಪರಿಶೀಲಿಸುವ ಅವಕಾಶವೂ ಅವರಿಗೆ ಒದಗಿದೆ. ತಂಡದಲ್ಲಿರುವ ಹೆಚ್ಚುವರಿ ಆಟಗಾರರಾದ ಆವೇಶ್ ಖಾನ್, ಜಿತೇಶ್ ಶರ್ಮ ಮತ್ತು ಶಹಬಾಝ್ ಅಹ್ಮದ್ರಿಗೆ ಈ ಸರಣಿಯಲ್ಲಿ ಆಡುವ ಅವಕಾಶ ಈವರೆಗೆ ಸಿಕ್ಕಿಲ್ಲ. ಹಾಗಾಗಿ, ಭಾರತದ ಪಾಲಿಗೆ ಹೆಚ್ಚಿನ ಮಹತ್ವವಿಲ್ಲದ ಮೂರನೇ ಪಂದ್ಯದಲ್ಲಿ ಈ ಆಟಗಾರರ ಸಾಮಥ್ರ್ಯ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಭಾರತೀಯ ತಂಡಾಡಳಿತ ತೆಗೆದುಕೊಳ್ಳಬಹುದಾಗಿದೆ.

ಸಂಜು ಸ್ಯಾಮ್ಸನ್ ಗೆ ವಿಶ್ರಾಂತಿ ನೀಡಿ, ಏಶ್ಯನ್ ಗೇಮ್ಸ್ಗೆ ಮುನ್ನ ಜಿತೇಶ್ಗೆ ಆಡುವ ಒಂದು ಅವಕಾಶವನ್ನು ನೀಡಲು ತಂಡಾಡಳಿತವು ನಿರ್ಧಾರ ತೆಗೆದುಕೊಳ್ಳದ ಹೊರತು, ಭಾರತೀಯ ಬ್ಯಾಟಿಂಗ್ ಸರದಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಕಳೆದ ಏಳು ಟ್ವೆಂಟಿ20 ಪಂದ್ಯಗಳಲ್ಲಿ ನಿಖರವಾಗಿ ಯಾರ್ಕರ್ಗಳನ್ನು ಬೌಲ್ ಮಾಡುವುದರಲ್ಲಿ ಅರ್ಶ್ದೀಪ್ ಸಿಂಗ್ ವಿಫಲರಾಗಿದ್ದಾರೆ. ತನ್ನ ಕೊರತೆಗಳನ್ನು ನೀಗಿಸಿಕೊಳ್ಳಲು ಅವರು ಇನ್ನೊಂದು ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಡಬ್ಲಿನ್ನ ಮ್ಯಾಲಹೈಡ್ ಮೈದಾನವು ಬ್ಯಾಟರ್ಗಳಿಗೆ ಪೂರಕವಾದ ಪಿಚ್ ಆಗಿದೆ. ಆದರೂ, ಪಂದ್ಯದ ಕೊನೆಯಲ್ಲಿ ಅದು ತನ್ನ ವೇಗವನ್ನು ಕಳೆದುಕೊಂಡು ಬೌಲರ್ಗಳಿಗೆ ನೆರವು ನೀಡಬಹುದಾಗಿದೆ.

ಭಾರತ-ಐರ್ಲ್ಯಾಂಡ್ ಮೊದಲನೇ ಪಂದ್ಯದಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ರಿಂಕು ಸಿಂಗ್, 21 ಎಸೆತಗಳಲ್ಲಿ 38 ರನ್ಗಳನ್ನು ಸಿಡಿಸಿದ್ದರು. ಅವರು ಭಾರತದ ಟ್ವೆಂಟಿ20 ತಂಡದಲ್ಲಿ ಖಾಯಂ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ತಂಡಗಳು

ಭಾರತ: ಜಸ್ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಜಿತೇಶ್ ಶರ್ಮ (ವಿಕೆಟ್ಕೀಪರ್), ಶಿವಮ್ ದುಬೆ, ವಾಶಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ ಕೃಷ್ಣ, ಅರ್ಶದೀಪ್ ಸಿಂಗ್, ಮುಕೇಶ್ ಕುಮಾರ್ ಮತ್ತು ಆವೇಶ್ ಖಾನ್.

ಐರ್ಲ್ಯಾಂಡ್: ಪೌಲ್ ಸ್ಟರ್ಲಿಂಗ್ (ನಾಯಕ), ಆ್ಯಂಡ್ರೂ ಬ್ಯಾಲ್ಬರ್ನೀ, ಮಾರ್ಕ್ ಅಡೇರ್, ರಾಸ್ ಅಡೇರ್, ಕರ್ಟಿಸ್ ಕ್ಯಾಂಫರ್, ಗ್ಯಾರತ್ ಡೆಲನಿ, ಜಾರ್ಜ್ ಡಾಕ್ರೆಲ್, ಫಿಯೋನ್ ಹ್ಯಾಂಡ್, ಜೋಶ್ ಲಿಟಲ್, ಬಾರಿ ಮೆಕಾರ್ತಿ, ಹ್ಯಾರಿ ಟೆಕ್ಟರ್, ಲೊರ್ಕನ್ ಟಕರ್, ತಿಯೊ ವಾನ್ ವೋರ್ಕೊಮ್, ಬೆನ್ ವೈಟ್ ಮತ್ತು ಕ್ರೇಗ್ ಯಂಗ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News