200 ಟ್ವೆಂಟಿ-20 ಪಂದ್ಯಗಳನ್ನು ಆಡಿದ ಎರಡನೇ ತಂಡ ಭಾರತ
Photo: NDTV
ಟ್ರಿನಿಡಾಡ್: ವೆಸ್ಟ್‌ಇಂಡೀಸ್ ಪ್ರವಾಸದಲ್ಲಿರುವ ಭಾರತವು 2 ಪಂದ್ಯಗಳ ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನು ಅಡಿದ ನಂತರ ಗುರುವಾರ 5 ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯವನ್ನಾಡಿದೆ. 2024ರಲ್ಲಿ ಟ್ವೆಂಟಿ-20 ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತದ ಹಲವು ಯುವ ಕ್ರಿಕೆಟಿಗರು ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಭಾರತವು ಈ ತನಕ 199 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು ಇಂದು ವಿಂಡೀಸ್ ವಿರುದ್ಧ ಆಡುವ ಮೂಲಕ ಪಾಕಿಸ್ತಾನದ ನಂತರ ಹೆಚ್ಚು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ 2ನೇ ತಂಡ ಎನಿಸಿಕೊಂಡಿದೆ. ಪಾಕ್ ತಂಡ ಈ ತನಕ 223 ಪಂದ್ಯಗಳನ್ನಾಡಿದೆ. ಭಾರತವು 130 ಪಂದ್ಯಗಳಲ್ಲಿ ಜಯ, 63ರಲ್ಲಿ ಸೋಲನುಭವಿಸಿದ್ದು, 2022ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಟೈ ಸಾಧಿಸಿತ್ತು. ಈ ಪಂದ್ಯದಲ್ಲಿ ಫಲಿತಾಂಶ ದಾಖಲಾಗಿರಲಿಲ್ಲ.
ಭಾರತವು 2018 ಹಾಗೂ 2022ರ ಮಧ್ಯೆ 6 ದ್ವಿಪಕ್ಷೀಯ ಟ್ವೆಂಟಿ-20 ಸರಣಿಗಳನ್ನು ಆಡಿದ್ದು, ಈ ಪೈಕಿ 8 ಪಂದ್ಯಗಳನ್ನು ವೆಸ್ಟ್‌ಇಂಡೀಸ್ ವಿರುದ್ಧ ಆಡಿದೆ. ಕೆರಿಬಿಯನ್ ನಾಡಿನಲ್ಲಿ ಭಾರತ ಹಾಗೂ ವೆಸ್ಟ್‌ಇಂಡೀಸ್ ಮಧ್ಯೆ 7 ಟಿ-20 ಪಂದ್ಯಗಳು ನಡೆದಿದ್ದು ಭಾರತ 4ರಲ್ಲಿ ಜಯ, 3ರಲ್ಲಿ ಸೋಲು ಕಂಡಿದೆ.