×
Ad

ಭಾರತ- ಅಫ್ಘಾನಿಸ್ತಾನ ಪಂದ್ಯದ 2ನೇ ಸೂಪರ್ ಓವರ್ ಕೂಡಾ ಟೈ ಆಗಿದ್ದರೆ ಏನಾಗುತ್ತಿತ್ತು?

Update: 2024-01-19 12:02 IST

Photo: twitter.com/BCCI

ಬೆಂಗಳೂರು: ಭಾರತ ಹಾಗೂ ಅಫ್ಘಾನಿಸ್ತಾನ ಟಿ-20 ಕ್ರಿಕೆಟ್ ತಂಡಗಳ ನಡುವೆ ಬುಧವಾರ ರಾತ್ರಿ ನಡೆದ ಹೋರಾಟ ಎರಡು ಸೂಪರ್ ಓವರ್‍ ಗಳಿಗೆ ಕಾರಣವಾಗಿತ್ತು. ನಾಯಕ ರೋಹಿತ್ ಶರ್ಮಾ ಅವರ ಐದನೇ ಶತಕದ ನೆರವಿನಿಂದ ಭಾರತ ನಿಗದಿತ 20 ಓವರ್‍ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಆದರೆ ದೊಡ್ಡ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಕೂಡಾ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತ್ತು. ಮೊದಲ ಸೂಪರ್ ಓವರ್‍ ನಲ್ಲಿ ಎರಡೂ ತಂಡಗಳು ತಲಾ 16 ರನ್ ಗಳಿಸಿದವು. ಎರಡನೇ ಸೂಪರ್ ಓವರ್‍ ನಲ್ಲಿ ಭಾರತ 11 ರನ್ ಗಳಿಸಿದರೆ, ಭಾರತದ ಬೌಲರ್ ರವಿ ಬಿಷ್ಣೋಯಿ ಸೂಪರ್ ಓವರ್‍ ನಲ್ಲಿ ಕೇವಲ ಒಂದು ರನ್ ನೀಡಿ ಎರಡು ವಿಕೆಟ್ ಪಡೆಯುವ ಮೂಲಕ ಸರಣಿ ವೈಟ್‍ವಾಶ್‍ಗೆ ಕಾರಣರಾದರು.

ಚುಟುಕು ಕ್ರಿಕೆಟ್‍ನಲ್ಲಿ ಸೂಪರ್ ಓವರ್ ಅಪರೂಪ ಎನಿಸಿದ್ದು, ಎರಡನೇ ಸೂಪರ್ ಓವರ್ ಕೂಡಾ ಟೈ ಆಗುತ್ತಿದ್ದರೆ ಫಲಿತಾಂಶ ಏನಾಗುತ್ತಿತ್ತು ಎಂಬ ಕುತೂಹಲ ಹಲವು ಮಂದಿ ಅಭಿಮಾನಿಗಳಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ; ಮೂರನೇ ಸೂಪರ್ ಓವರ್ ನಡೆಯುತ್ತದೆ. ಹಾಗೂ ಫಲಿತಾಂಶ ನಿರ್ಧಾರವಾಗುವವರೆಗೂ ಸೂಪರ್ ಓವರ್‍ ಗಳು ಮುಂದುವರಿಯುತ್ತಲೇ ಇರುತ್ತವೆ.

ಸೂಪರ್ ಓವರ್‍ ಗಳ ಬ್ಯಾಟಿಂಗ್ ಕ್ರಮಾಂಕ ನಿರ್ಧರಿಸಲು ಕೂಡಾ ನಿಯಮವಿದೆ. ಪಂದ್ಯದಲ್ಲಿ ಎರಡನೇ ಬಾರಿ ಬ್ಯಾಟಿಂಗ್ ಮಾಡಿದ ತಂಡ ಮೊದಲ ಸೂಪರ್ ಓವರ್‍ ನಲ್ಲಿ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆಯುತ್ತದೆ. ಒಂದು ವೇಳೆ ಸೂಪರ್ ಓವರ್‍ ಗಳು ಮುಂದುವರಿದರೆ, ಪರ್ಯಾಯವಾಗಿ ಉಭಯ ತಂಡಗಳು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆಯುತ್ತವೆ.

ಆದರೆ ಒಬ್ಬ ಬೌಲರ್ ಹಲವು ಸೂಪರ್ ಓವರ್ ಗಳ ಬೌಲಿಂಗ್ ಮಾಡಲು ಅವಕಾಶ ಇರುವುದಿಲ್ಲ. ಬೆಂಗಳೂರು ಪಂದ್ಯದಲ್ಲಿ ಅಫ್ಘಾನಿಸ್ತಾನ ಅಜ್ಮತ್ತುಲ್ಲಾ ಒಮರ್‍ಝಾಯಿ ಅವರನ್ನು ಎರಡನೇ ಸೂಪರ್ ಓವರ್‍ ನಲ್ಲೂ ಬೌಲಿಂಗ್ ಮಾಡಿಲು ಬಯಸಿತ್ತು. ಆದರೆ ಅನಿವಾರ್ಯವಾಗಿ ಬಳಿಕ ಫರೀದ್ ಅಹ್ಮದ್ ಅವರು ಬೌಲಿಂಗ್ ಮಾಡಬೇಕಾಯಿತು. ಭಾರತದ ಪರ ಮುಕೇಶ್ ಕುಮಾರ್ ಮೊದಲ ಸೂಪರ್ ಓವರ್ ಬೌಲ್ ಮಾಡಿದರೆ, ರವಿ ಬಿಷ್ಣೋಯಿ ಎರಡನೇ ಓವರ್ ಬೌಲ್ ಮಾಡಿ ಭಾರತದ ಗೆಲುವು ಖಾತರಿಪಡಿಸಿದರು.

ಮೊದಲ ಸೂಪರ್ ಓವರ್‍ ನಲ್ಲಿ ಒಬ್ಬ ಬ್ಯಾಟರ್ ಔಟ್ ಆಗದೇ ಇದ್ದ ಪಕ್ಷದಲ್ಲಿ ಅದೇ ಬ್ಯಾಟರ್ ಎರಡನೇ ಸೂಪರ್ ಓವರ್‍ ನಲ್ಲೂ ಬ್ಯಾಟಿಂಗ್ ನಡೆಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News