×
Ad

ಭಾರತಕ್ಕೆ ಶರಣಾದ ಆಸ್ಟ್ರೇಲಿಯ

Update: 2023-11-26 22:49 IST

Photo: BCCI

ತಿರುವನಂತಪುರಂ: ಇಲ್ಲಿನ ಗ್ರೀನ್ ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿದೆ.

ಭಾರತ ನೀಡಿದ 236 ರನ್ ಗಳ ಗುರಿ ಬೆನ್ನಟ್ಟಲು ವಿಫಲವಾದ ಆಸ್ಟ್ರೇಲಿಯ 9 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಭಾರತ ನೀಡಿದ 236 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಸ್ಟೀವ್ ಸ್ಮಿತ್ ಮತ್ತು ಮ್ಯಾಥ್ಯೂ ಶಾರ್ಟ್ ಭಾರತೀಯ ಬೌಲರ್ ಗಳನ್ನು ದಂಡಿಸಲು ತೊಡಗಿದರು. 2.5 ಓವರ್ ಗೆ ಆಸ್ಟ್ರೇಲಿಯ 35 ರನ್ ಗಳಿಸಿತ್ತು. ಭಾರತಕ್ಕೆ ಸವಾಲಾಗಿ ಪರಿಣಮಿಸುತ್ತಿದ್ದ ಮ್ಯಾಥ್ಯೂ ಶಾರ್ಟ್ 10 ಎಸೆತಗಳಲ್ಲಿ 3 ಬೌಂಡರಿ ಸಹಿತ 19 ರನ್ ಗಳಿಸಿದ್ದಾಗ ರವಿ ಬಿಷ್ಣೋಯಿ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು.

ಮ್ಯಾಥ್ಯೂ ಶಾರ್ಟ್ ವಿಕೆಟ್ ಪತನ ಆಸ್ಟ್ರೇಲಿಯ ದ ಪತನಕ್ಕೆ ಮುನ್ನುಡಿಯಾಯಿತು. ಜೋಸ್ ಇಂಗ್ಲಿಸ್ ಬಂದ ದಾರಿಯಲ್ಲಿಯೇ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ವಿಶ್ವಕಪ್ ದ್ವಿಶತಕ ವೀರ ಗ್ಲೆನ್ ಮ್ಯಾಕ್ಸ್ ವೇಲ್ 12 ಗಳಿಸಿ ಅಕ್ಷರ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ತಂಡ 58  ರನ್ ಗಳಿಸಿದ್ದಾಗ ಸ್ಟೀವ್ ಸ್ಮಿತ್ 19 ರನ್ ಗಳಿಸಿ ಪ್ರಸಿದ್ಧ ಕೃಷ್ಣ ಗೆ ವಿಕೆಟ್ ನೀಡಿದರು.

ಕ್ರೀಸ್ ನಲ್ಲಿದ್ದ ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್ ಜೋಡಿ ಆಸ್ಟ್ರೇಲಿಯ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಡೆದು, ಬ್ಯಾಟ್ ಬೀಸಿದರು. 25 ಎಸೆತ ಎದುರಿಸಿದ ಸ್ಟೊಯಿನಿಸ್ 4 ಸಿಕ್ಸರ್ 2 ಬೌಂಡರಿ ಸಹಿತ 45 ರನ್ ಗಳಿಸಿದರು. ಟಿಮ್ ಡೇವಿಡ್ 22 ಎಸೆತಗಳಲ್ಲಿ 37 ರನ್ ಗಳಿಸಿದರು. ಭಾರತಕ್ಕೆ ಸವಾಲಾಗಿದ್ದ ಜೋಡಿಯಲ್ಲಿ ಮೊದಲು ಟಿಮ್ ಡೇವಿಡ್ ಅವರನ್ನು ರವಿ ಬಿಷ್ಣೋಯಿ ಔಟ್ ಮಾಡಿದರು. ಬಳಿಕ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಮುಖೇಶ್ ಕುಮಾರ್ ಪೆವಿಲಿಯನ್ ಗೆ ಕಳುಹಿಸಿದರು.

ನಂತರ ಬಂದ ನಾಯಕ ಮ್ಯಾಥ್ಯೂ ವೇಡ್ ತಂಡಕ್ಕೆ ಆಸರೆಯಾಗಿ ನಿಂತು 23 ಎಸೆತಗಳಲ್ಲಿ 42 ರನ್ ಗಳಿಸಿ ಕೊನೆಯ ವರೆಗೂ ನಿಂತು ಆಲೌಟ್ ಆಗುವುದನ್ನು ತಪ್ಪಿಸಿದರು. ಉಳಿದಂತೆ ಸೀನ್ ಅಬಾಟ್ 1, ನಾಥನ್ ಎಲಿಸ್ 1, ಆಡಮ್ ಝಂಪಾ 1 ರನ್ ಗಳಿಸಿದರು.  ತನ್ವೀರ್ ಸಂಗಾ 2 ರನ್ ಗಳಿಸಿ ಔಟಾಗದೆ ಉಳಿದರು. 

ಭಾರತದ ಸಂಘಟಿತ ಬೌಲಿಂಗ್ ದಾಳಿ ಯಲ್ಲಿ ಪ್ರಸಿದ್ಧ ಕೃಷ್ಣ, ರವಿ ಬಿಷ್ಣೋಯಿ ತಲಾ ಮೂರು ವಿಕೆಟ್ ಪಡೆದು ಗಮನ ಸೆಳೆದರು. ಅರ್ಷದೀಪ್ ಸಿಂಗ್,  ಅಕ್ಷರ್ ಪಟೇಲ್, ಮುಖೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News