ಬಾಲಕಿಯರ ಫಿಫಾ ಪ್ರತಿಭಾ ಅಕಾಡೆಮಿ ಆರಂಭಕ್ಕೆ ಎಐಎಫ್ಎಫ್-ತೆಲಂಗಾಣ ಸರಕಾರ ಒಪ್ಪಂದ
Photo : AIFF
ಹೈದರಾಬಾದ್, ಆ.3: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್)ಹಾಗೂ ತೆಲಂಗಾಣ ಸರಕಾರವು ಭಾರತದ ಮೊತ್ತ ಮೊದಲ ಬಾಲಕಿಯರ ಫಿಫಾ ಪ್ರತಿಭಾ ಅಕಾಡೆಮಿಯನ್ನು ಗಚಿಬೌಲಿ ಕ್ರೀಡಾಂಗಣದ ಸಂಕೀರ್ಣದಲ್ಲಿ ಆರಂಭಿಸಲು ತಿಳುವಳಿಕೆ ಒಪ್ಪಂದಕ್ಕೆ(ಎಂಒಯು)ಸಹಿ ಹಾಕಿವೆ.
ಶನಿವಾರ ನಡೆದ ತೆಲಂಗಾಣ ಕ್ರೀಡಾ ಸಮಾವೇಶದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ರಾಷ್ಟ್ರೀಯ ಫುಟ್ಬಾಲ್ ಒಕ್ಕೂಟವು ಫಿಫಾದೊಂದಿಗೆ ಸಮನ್ವಯದಿಂದ ತಾಂತ್ರಿಕ ಚೌಕಟ್ಟು, ಟ್ಯಾಲೆಂಟ್ ಸ್ಕೌಟಿಂಗ್ ಹಾಗೂ ತರಬೇತಿ ಪಠ್ಯಕ್ರಮವನ್ನು ಮುನ್ನಡೆಸಿದರೆ, ತೆಲಂಗಾಣ ಕ್ರೀಡಾ ಪ್ರಾಧಿಕಾರವು ಮೂಲ ಸೌಕರ್ಯ, ಲಾಜಿಸ್ಟಿಕ್ಸ್, ಶಿಕ್ಷಣ, ಹಣಕಾಸು ಹಾಗೂ ಕಲ್ಯಾಣ ಕಾರ್ಯವನ್ನು ನೋಡಿಕೊಳ್ಳಲಿದೆ.
‘‘ಇದು ಸಮಾನ ಫುಟ್ಬಾಲ್ ಅಭಿವೃದ್ಧಿಯತ್ತ ನಮ್ಮ ಪ್ರಯಾಣದಲ್ಲಿ ನಿರ್ಣಾಯಕ ಕ್ಷಣವಾಗಿದೆ. ಈ ಅಕಾಡೆಮಿಯು ಭಾರತ ತಂಡವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುವ ಕನಸು ಕಾಣುವ ಫುಟ್ಬಾಲ್ ಆಟಗಾರರ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅಂಡರ್-17 ಪುರುಷರ ಹಾಗೂ ಮಹಿಳಾ ಫಿಫಾ ವಿಶ್ವಕಪ್ ಗಳಿಗೆ ಅರ್ಹತೆ ಪಡೆಯುವ ನಮ್ಮ ಗುರಿಯತ್ತ ಇದು ದಿಟ್ಟ ಹೆಜ್ಜೆಯಾಗಿದೆ’’ ಎಂದು ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಹೇಳಿದರು.
ಅಕಾಡೆಮಿ ಸ್ಥಾಪನೆಯಾದ ನಂತರ 60 ಆಯ್ದ ಆಟಗಾರರಿಗೆ ವರ್ಷಪೂರ್ತಿ ಉನ್ನತ ಕಾರ್ಯಕ್ಷಮತೆ, ತರಬೇತಿಯನ್ನು ನೀಡುತ್ತದೆ. 30 ಹುಡುಗರು(ಅಂಡರ್-14)ಹಾಗೂ 30 ಹುಡುಗಿಯರು(ಅಂಡರ್16)ಇರಲಿದ್ದು, ಪ್ರತೀ ವಿಭಾಗದಲ್ಲಿ ತೆಲಂಗಾಣ ಮೂಲದ 10 ಆಟಗಾರರು ಇರುತ್ತ್ತಾರೆೆ.