ದುಲೀಪ್ ಟ್ರೋಫಿ: ಮೊದಲ ಪಂದ್ಯದಿಂದ ಹೊರಗುಳಿದ ಇಶಾನ್ ಕಿಶನ್
ಪೂರ್ವ ವಲಯ ನಾಯಕನಾಗಿ ಈಶ್ವರನ್
ಇಶಾನ್ ಕಿಶನ್ | PC : PTI
ಹೊಸದಿಲ್ಲಿ, ಆ.18: ಬ್ರಿಟನ್ ನಲ್ಲಿ ನಾಟಿಂಗ್ ಹ್ಯಾಮ್ ಶೈರ್ ಪರ ಕೌಂಟಿ ಚಾಂಪಿಯನ್ಶಿಪ್ ನಲ್ಲಿ ಆಡುತ್ತಿದ್ದಾಗ ಆಗಿರುವ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಇಶಾನ್ ಕಿಶನ್ ಅವರು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದಾರೆ.
ಕಿಶನ್ ಬದಲಿಗೆ ಅಭಿಮನ್ಯು ಈಶ್ವರನ್ ಅವರು ಪೂರ್ವ ವಲಯ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಪೂರ್ವ ವಲಯವು ಆಗಸ್ಟ್ 28ರಂದು ಶುಭಮನ್ ಗಿಲ್ ನಾಯಕತ್ವದ ಉತ್ತರ ವಲಯ ತಂಡವನ್ನು ಎದುರಿಸಲಿದೆ.
ಆಕಾಶ್ ದೀಪ್ ಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದ್ದು, ಟೂರ್ನಮೆಂಟ್ನಿಂದ ವಂಚಿತವಾಗುವ ಸಾಧ್ಯತೆಯಿದೆ. ಇದು ಪೂರ್ವ ವಲಯಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಆಕಾಶ್ ಅವರು ಇತ್ತೀಚೆಗೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಪೈಕಿ 4ರಲ್ಲಿ ಆಡಿದ್ದರು. ಗಾಯದಿಂದಾಗಿ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ಪಂದ್ಯಾವಳಿಯ ಆರಂಭಿಕ ಪಂದ್ಯಕ್ಕಾಗಿ ಆಕಾಶ್ ಸ್ಥಾನಕ್ಕೆ ಅಸ್ಸಾಂನ ಮುಖ್ತಾರ್ ಹುಸೇನ್ ಹಾಗೂ ಕಿಶನ್ ಬದಲಿಗೆ ಒಡಿಶಾದ ಆಶೀರ್ವಾದ ಸ್ವೈನ್ ಆಡಲಿದ್ದಾರೆ.
ರಿಯಾನ್ ಪರಾಗ್ ಅವರು ಪೂರ್ವ ವಲಯದ ಉಪ ನಾಯಕನಾಗಿ ನೇಮಕಗೊಂಡಿದ್ದಾರೆ.
*ಪೂರ್ವ ವಲಯದ ಪರಿಷ್ಕೃತ ತಂಡ: ಅಭಿಮನ್ಯು ಈಶ್ವರನ್(ನಾಯಕ), ರಿಯಾನ್ ಪರಾಗ್(ಉಪ ನಾಯಕ), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ದಿನೇಶ್ ದಾಸ್, ಶ್ರೀಧಾಮ್ ಪಾಲ್, ಶರಣ್ದೀಪ್ ಸಿಂಗ್, ಕುಮಾರ ಕುಶಾಗ್ರ(ವಿಕೆಟ್ ಕೀಪರ್), ಆಶೀರ್ವಾದ್ ಸ್ವೈನ್(ವಿಕೆಟ್ ಕೀಪರ್), ಉತ್ಕರ್ಷ ಸಿಂಗ್, ಮನಿಶಿ, ಸೂರಜ್ ಸಿಂಧು ಜೈಸ್ವಾಲ್, ಮುಕೇಶ್ ಕುಮಾರ್, ಮುಖ್ತರ್ ಹುಸೇನ್ ಹಾಗೂ ಮುಹಮ್ಮದ್ ಶಮಿ.