24 ಗಂಟೆಗಳಲ್ಲಿ ಜಸ್ಪ್ರಿತ್ ಬುಮ್ರಾರ ಸ್ಕ್ಯಾನಿಂಗ್ ಸಮಗ್ರ ವರದಿ ಲಭ್ಯ?
ಜಸ್ಪ್ರಿತ್ ಬುಮ್ರಾ | PTI
ಹೊಸದಿಲ್ಲಿ: ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರ ಸ್ಕ್ಯಾನಿಂಗ್ ಅನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್ಸಿಎ)ಯಲ್ಲಿ ನಡೆಸಲಾಗಿದ್ದು, ಸಮಗ್ರ ವರದಿಯು ಮುಂದಿನ 24 ಗಂಟೆಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.
ಬುಮ್ರಾ ಅವರು ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವ ನಿರೀಕ್ಷೆಯಿದ್ದು, ಬಿಸಿಸಿಐನ ವೈದ್ಯಕೀಯ ತಂಡದೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.
ವೈದ್ಯಕೀಯ ತಂಡವು ವರದಿಯನ್ನು ಸಿದ್ದಪಡಿಸಿದ ನಂತರ ಭಾರತೀಯ ಟೀಮ್ ಮ್ಯಾನೇಜ್ಮೆಂಟ್ನೊಂದಿಗೆ ಚರ್ಚಿಸಲಿದೆ. ವರದಿ ಸಿದ್ದವಾದ ನಂತರ ನ್ಯೂಝಿಲ್ಯಾಂಡ್ನ ಡಾ. ರೋವನ್ ಸ್ಕೌಟೆನ್ ಅವರ ಅಭಿಪ್ರಾಯವನ್ನು ಪಡೆಯಲಾಗುತ್ತದೆ. ಬುಮ್ರಾ ಅವರು ಜನವರಿಯಲ್ಲಿ ಮೊದಲ ಬಾರಿ ಸ್ಕ್ಯಾನಿಂಗ್ಗೆ ಒಳಗಾಗಿದ್ದರು. ಆ ವರದಿಯನ್ನು ಡಾ. ರೋವನ್ರೊಂದಿಗೆ ಹಂಚಿಕೊಳ್ಳಲಾಗಿತ್ತು.
ಚಾಂಪಿಯನ್ಸ್ ಟ್ರೋಫಿಗೆ ಅಂತಿಮ ತಂಡವನ್ನು ಪ್ರಕಟಿಸುವ ಗಡುವು ಹತ್ತಿರದಲ್ಲಿದೆ. ಬುಮ್ರಾ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ವರದಿಗಾಗಿ ಕಾಯುತ್ತಿದೆ.
‘‘ಸ್ಕ್ಯಾನಿಂಗ್ ಪೂರ್ಣಗೊಂಡ ನಂತರ ನಮಗೆ ಸ್ಪಷ್ಟತೆ ಸಿಗಲಿದೆ’’ಎಂದು ಇಂಗ್ಲೆಂಡ್ ವಿರುದ್ಧದ ನಾಗ್ಪುರದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಇಂಗ್ಲೆಂಡ್ ಎದುರಿನ ಭಾರತದ ಏಕದಿನ ತಂಡಕ್ಕೆ ಬುಮ್ರಾ ಬದಲಿಗೆ ವರುಣ್ ಚಕ್ರವರ್ತಿಯನ್ನು ಆಯ್ಕೆ ಮಾಡಲಾಗಿದೆ. ಬುಮ್ರಾ ಆಯ್ಕೆಗೆ ಅಲಭ್ಯರಾದರೆ ಆಯ್ಕೆದಾರರು ವರುಣ್ ಅಥವಾ ಹರ್ಷಿತ್ ರಾಣಾರ ಪೈಕಿ ಯಾರನ್ನು ಆಯ್ಕೆ ಮಾಡುತ್ತಾರೆಂದು ಕಾದು ನೋಡಬೇಕಾಗಿದೆ.
ಆಸ್ಟ್ರೇಲಿಯ ತಂಡದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆದ ಟೆಸ್ಟ್ ಸರಣಿಯಲ್ಲಿ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ 2ನೇ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡದ ಬುಮ್ರಾಗೆ ಐದು ವಾರಗಳ ವಿಶ್ರಾಂತಿಗೆ ಸೂಚಿಸಲಾಗಿತ್ತು. ಸ್ಕ್ಯಾನಿಂಗ್ಗಾಗಿ ಫೆ.2ರಂದು ಬೆಂಗಳೂರಿಗೆ ತಲುಪಿದ್ದರು.