ʼಬಾಕಿ ಸಬ್ ಫೇಕ್ ಹೇʼ: ವಿಂಡೀಸ್ ವಿರುದ್ಧದ ಗೆಲುವಿನ ಬಳಿಕ ಸಿರಾಜ್ ರನ್ನು ಕೊಂಡಾಡಿದ ಬೂಮ್ರಾ ಪೋಸ್ಟ್ ವೈರಲ್
ಅಹ್ಮದಾಬಾದ್: ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಪ್ರಥಮ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 140 ರನ್‍ಗಳ ಭಾರೀ ಅಂತರದಲ್ಲಿ ಗೆಲ್ಲುವ ಮೂಲಕ ಭಾರತ ತಂಡ ತವರಿನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದ್ದು, ಮಾತ್ರವಲ್ಲದೇ ಜಾಲತಾಣಗಳಲ್ಲೂ ಸದ್ದು ಮಾಡಿದೆ. ಜಸ್‍ಪ್ರೀತ್ ಬೂಮ್ರಾ ಅವರ ಇನ್‍ಸ್ಟಾಗ್ರಾಂ ಪೋಸ್ಟ್ ಇದಕ್ಕೆ ಕಾರಣ.
ಮುಹಮ್ಮದ್ ಸಿರಾಜ್ ಅವರ ಅದ್ಭುತ ಬೌಲಿಂಗ್ ಯಶಸ್ಸನ್ನು ಸಂಭ್ರಮಿಸುವ ಸಲುವಾಗಿ ಬೂಮ್ರಾ ಪಂದ್ಯದ ಬಳಿಕ ಇನ್‍ಸ್ಟಾಗ್ರಾಂನಲ್ಲಿ @Mohammedsirajofficial (ಫೈರ್ ಎಮೋಜಿಯೊಂದಿಗೆ) ಬಾಕಿ ಸಬ್ ಫೇಕ್ ಹೈ ಟೀಕ್ ಹೈ (ಮುಹಮ್ಮದ್ ಸಿರಾಜ್ ಮಾತ್ರ ಸತ್ಯ, ಬೇರೆಲ್ಲ ಮಿಥ್ಯ) ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಇದು ಈ ಹಿಂದೆ ಮುಹಮ್ಮದ್ ಸಿರಾಜ್ ಅವರು ಪೋಸ್ಟ್ ಮಾಡಿದ ಕ್ಲಿಪ್‍ನ ಮರು ವ್ಯಾಖ್ಯಾನವಾಗಿದೆ.
ಈ ಪೋಸ್ಟ್ ಇಂಟರ್ ನೆಟ್‍ನಲ್ಲಿ ವೈರಲ್ ಆಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಸಿರಾಜ್ 40 ರನ್‍ಗಳಿಗೆ 4 ವಿಕೆಟ್ ಕಿತ್ತರೆ, ಎರಡನೇ ಇನಿಂಗ್ಸ್ ನಲ್ಲಿ 31 ರನ್‍ಗೆ 3 ವಿಕೆಟ್ ಪಡೆದಿದ್ದರು. ಅಹ್ಮದಾಬಾದ್‍ನಲ್ಲಿ ಕೇವಲ ಮೂರು ದಿನಗಳ ಅಂತರದಲ್ಲಿ ಎರಡು ಬಾರಿ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು.
ರವೀಂದ್ರ ಜಡೇಜಾ ಕೂಡಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಆಲ್‍ರೌಂಡ್ ಪ್ರದರ್ಶನ ನೀಡಿದರು. ಅಜೇಯ 104 ರನ್ ಸಿಡಿಸುವ ಜತೆಗೆ ಎರಡನೇ ಇನಿಂಗ್ಸ್ ನಲ್ಲಿ 54 ರನ್‍ಗೆ 4 ವಿಕೆಟ್ ಕಿತ್ತರು.
ಅಲಿಕ್ ಅಥನಾಝೆ ಮತ್ತು ಜೆಸ್ಟಿನ್ ಗ್ರೀವ್ಸ್ ನಡುವೆ ಒಂದು ಜತೆಯಾಟ ಗಮನ ಸೆಳೆದದ್ದು ಹೊರತುಪಡಿಸಿದರೆ, 45.1 ಓವರ್ ಗಳಲ್ಲಿ ಕೇವಲ 146 ರನ್‍ಗಳಿಗೆ ಪ್ರವಾಸಿ ತಂಡ ಸರ್ವಪತನ ಕಂಡಿತು.