×
Ad

ರೋಚಕ ಘಟ್ಟ ತಲುಪಿದ ಕರ್ನಾಟಕ- ಮಹಾರಾಷ್ಟ್ರ ರಣಜಿ ಪಂದ್ಯ

ಮಯಾಂಕ್ ಅಗರ್ವಾಲ್ ಅರ್ಧಶತಕ

Update: 2025-11-10 21:18 IST

Photo Credit : X

ಪುಣೆ, ನ.10: ಕರ್ನಾಟಕ ಹಾಗೂ ಮಹಾರಾಷ್ಟ್ರ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಉಭಯ ತಂಡಗಳು ಗೆಲುವು ದಾಖಲಿಸಿ ಆರಂಕ ಗಳಿಸುವ ವಿಶ್ವಾಸದಲ್ಲಿವೆ.

ಜಲಜ್ ಸಕ್ಸೇನ ಅವರ ಸಾಹಸದಿಂದಾಗಿ ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್‌ ನಲ್ಲಿ ದೊಡ್ಡ ಮುನ್ನಡೆ ನಿರಾಕರಿಸಿದ ಮಹಾರಾಷ್ಟ್ರ ತಂಡವು 3ನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡದ 5 ವಿಕೆಟ್‌ ಗಳನ್ನು ಉರುಳಿಸುವಲ್ಲಿ ಯಶಸ್ವಿಯಾಗಿದೆ.

ನಾಯಕ ಮಯಾಂಕ್ ಅಗರ್ವಾಲ್(ಔಟಾಗದೆ 64, 145 ಎಸೆತ, 6 ಬೌಂಡರಿ)ಅರ್ಧಶತಕದ ಬಲದಿಂದ ಸೋಮವಾರ ದಿನದಾಟದಂತ್ಯಕ್ಕೆ 5 ವಿಕೆಟ್‌ ಗಳ ನಷ್ಟಕ್ಕೆ 144 ರನ್ ಗಳಿಸಿರುವ ಕರ್ನಾಟಕ ತಂಡವು ಒಟ್ಟು 157 ರನ್ ಮುನ್ನಡೆಯಲ್ಲಿದೆ.

ಇದಕ್ಕೂ ಮೊದಲು ಕರ್ನಾಟಕ ತಂಡದ ಮೊದಲ ಇನಿಂಗ್ಸ್ 313 ರನ್‌ ಗೆ ಉತ್ತರವಾಗಿ 113 ರನ್ ಹಿನ್ನಡೆಯೊಂದಿಗೆ 6 ವಿಕೆಟ್‌ ಗಳ ನಷ್ಟಕ್ಕೆ 200 ರನ್‌ ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಮಹಾರಾಷ್ಟ್ರ ತಂಡದ ಪರ ಕೆಳ ಕ್ರಮಾಂಕದಲ್ಲಿ ಜಲಜ್ ಸಕ್ಸೇನ(72 ರನ್, 147 ಎಸೆತ, 10 ಬೌಂಡರಿ)ಹಾಗೂ ವಿಕ್ಕಿ ಒಸ್ವಾಲ್(20 ರನ್, 92 ಎಸೆತ, 2 ಬೌಂಡರಿ) 7ನೇ ವಿಕೆಟ್‌ ಗೆ 73 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ವಿಕ್ಕಿ ಔಟಾದ ನಂತರ ರಾಮಕೃಷ್ಣ ಘೋಷ್(36 ರನ್, 46 ಎಸೆತ, 4 ಬೌಂಡರಿ,1 ಸಿಕ್ಸರ್)ಜೊತೆ ಕೈಜೋಡಿಸಿದ ಜಲಜ್ ಸಕ್ಸೇನ ಅವರು 8ನೇ ವಿಕೆಟ್‌ ಗೆ ಇನ್ನೂ 26 ರನ್ ಸೇರಿಸಿ ತಂಡದ ಮೊತ್ತವನ್ನು 282ಕ್ಕೆ ತಲುಪಿಸಿದರು. ಸಕ್ಸೇನ ವಿಕೆಟನ್ನು ಕಬಳಿಸಿದ ವಿದ್ವತ್ ಕಾವೇರಪ್ಪ ಈ ಜೋಡಿಯನ್ನು ಬೇರ್ಪಡಿಸಿದರು.

ರಾಮಕೃಷ್ಣ ಔಟಾಗುವುದರೊಂದಿಗೆ ಮಹಾರಾಷ್ಟ್ರದ ಮೊದಲ ಇನಿಂಗ್ಸ್ 300 ರನ್‌ ಗೆ ಕೊನೆಗೊಂಡಿತು.

ಕರ್ನಾಟಕದ ಪರ ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್(4-70)ಹಾಗೂ ಮುಹ್ಸಿನ್ ಖಾನ್(3-64)ಯಶಸ್ವಿ ಪ್ರದರ್ಶನ ನೀಡಿದರು. ವೇಗದ ಬೌಲರ್ ವಿದ್ವತ್ ಕಾವೇರಪ್ಪ(2-74) ಎರಡು ವಿಕೆಟ್ ಪಡೆದರು.

13 ರನ್ ಅಲ್ಪ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಮಯಾಂಕ್ ಹಾಗೂ ಅನೀಶ್(17 ರನ್, 45 ಎಸೆತ)ಸಾಧಾರಣ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ ಗೆ 50 ರನ್ ಸೇರಿಸಿತು. ಅನೀಶ್ ಔಟಾದ ನಂತರ ಕೆ.ಶ್ರೀಜಿತ್(29 ರನ್, 62 ಎಸೆತ)ಹಾಗೂ ಮಯಾಂಕ್ 2ನೇ ವಿಕೆಟ್‌ ಗೆ 48 ರನ್ ಜೊತೆಯಾಟ ನಡೆಸಿದರು.

ಶ್ರೀಜಿತ್, ಕರುಣ್ ನಾಯರ್(15 ರನ್, 34 ಎಸೆತ)ಹಾಗೂ ಆರ್.ಸ್ಮರಣ್(4 ರನ್)ಬೆನ್ನುಬೆನ್ನಿಗೆ ಔಟಾದರು. ನೈಟ್ ವಾಚ್‌ ಮ್ಯಾನ್ ಅಭಿಲಾಷ್ ಶೆಟ್ಟಿ ದಿನದಾಟದಂತ್ಯಕ್ಕೆ 4 ರನ್‌ ಗೆ ವಿಕೆಟ್ ಒಪ್ಪಿಸಿದರು.

ಕೇವಲ 157 ರನ್ ಮುನ್ನಡೆಯಲ್ಲಿರುವ ಕರ್ನಾಟಕದ ಕೈಯಲ್ಲಿ 5 ವಿಕೆಟ್‌ ಗಳು ಉಳಿದಿವೆ. ಕೊನೆಯ ದಿನದಾಟದಲ್ಲಿ ಪ್ರತೀ ರನ್, ಪ್ರತೀ ಸ್ಪೆಲ್ ಕೂಡ ಮುಖ್ಯವಾಗಿದ್ದು, ಉಭಯ ತಂಡಗಳು ಮೇಲುಗೈ ಸಾಧಿಸಲು ಹೋರಾಡುವುದು ನಿಶ್ಚಿತ.

►ಸಂಕ್ಷಿಪ್ತ ಸ್ಕೋರ್

ಕರ್ನಾಟಕ ಮೊದಲ ಇನಿಂಗ್ಸ್: 313 ರನ್

ಮಹಾರಾಷ್ಟ್ರ ಮೊದಲ ಇನಿಂಗ್ಸ್: 300 ರನ್

(ಜಲಜ್ ಸಕ್ಸೇನ 72, ಪೃಥ್ವಿ ಶಾ 71, ರಾಮಕೃಷ್ಣ 36, ಶ್ರೇಯಸ್ ಗೋಪಾಲ್ 4-70, ಮುಹ್ಸಿನ್ ಖಾನ್‌3-64)

ಕರ್ನಾಟಕ ಎರಡನೇ ಇನಿಂಗ್ಸ್: 144/5

(ಮಯಾಂಕ್ ಅಗರ್ವಾಲ್ ಔಟಾಗದೆ 64, ಕೆ.ಶ್ರೀಜಿತ್ 29, ಮುಕೇಶ್ ಚೌಧರಿ 3-70)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News