×
Ad

ಕೇರಳ ಭೇಟಿಯನ್ನು ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ ಕರೆ ತರಲಾಗುವುದು ಎಂದಿದ್ದ ಕೇರಳ ಸರಕಾರ

Update: 2025-08-07 23:43 IST

Photo : AFP

ತಿರುವನಂತಪುರಂ: ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ ಕರೆ ತರಲಾಗುವುದು ಎಂದು ಭಾರಿ ಪ್ರಚಾರ ನೀಡಿದ್ದ ಸಿಪಿಐ(ಎಂ) ನೇತೃತ್ವದ ಕೇರಳ ಸರಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ತನ್ನ ಕೇರಳ ಭೇಟಿಯನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.

ಆ ಮೂಲಕ, ವಿಶ್ವೆ ಚಾಂಪಿಯನ್ನರನ್ನು ಕರೆತರುವ ಪ್ರಯತ್ನ ಮಾತ್ರ ವಿಫಲವಾಗದೆ, ಈ ಪ್ರಯತ್ನಕ್ಕಾಗಿ ಈಗಾಗಲೇ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ರಾಜ್ಯದ ಬೊಕ್ಕಸಕ್ಕೆ ಇದರಿಂದ ಯಾವುದೇ ಹೊರೆಯಾಗುವುದಿಲ್ಲ ಎಂಬ ಸರಕಾರದ ಪ್ರತಿಪಾದನೆಯೂ ಸುಳ್ಳು ಎಂಬ ಸಂಗತಿ ಬಯಲಾಗಿದೆ.

ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ನೀಡಿರುವ ಮಾಹಿತಿಯ ಪ್ರಕಾರ, ಅರ್ಜೆಂಟೀನಾ ಫುಟ್ ಬಾಲ್ ತಂಡದ ಅಧಿಕಾರಿಗಳನ್ನು ಭೇಟಿ ಮಾಡಲು ಸ್ಪೇನ್ ಗೆ ತೆರಳಿದ್ದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ನೇತೃತ್ವದ ನಿಯೋಗದ ಭೇಟಿಗಾಗಿ 13 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಬಹಿರಂಗವಾಗಿದೆ.

ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ ಕರೆತರಲಾಗುವುದು ಎಂದು ರಾಜ್ಯ ಸರಕಾರ ಕಳೆದ ವರ್ಷ ಘೋಷಿಸಿತ್ತು. ಇದು ಫುಟ್ ಬಾಲ್ ಹುಚ್ಚಿಗೆ ಹೆಸರುವಾಸಿವಾಗಿರುವ ಕೇರಳವನ್ನು ರೋಮಾಂಚನಗೊಳಿಸಿತ್ತು. ಆದರೆ, ಪ್ರಾಯೋಜಕರು ಅಗತ್ಯ ಮೊತ್ತವನ್ನು ಪಾವತಿಸಿದ್ದರೂ, ಅರ್ಜೆಂಟೀನಾ ತಂಡ ಕೇರಳಕ್ಕೆ ಭೇಟಿ ನೀಡುತ್ತಿಲ್ಲ ಎಂದು ಕೆಲ ದಿನಗಳ ಹಿಂದಷ್ಟೆ ಕ್ರೀಡಾ ಸಚಿವರು ಮಾಹಿತಿ ನೀಡಿದ್ದರು.

ಅರ್ಜೆಂಟೀನಾ ತಂಡದ ಭೇಟಿಯನ್ನು ತಾತ್ಕಾಲಿಕವಾಗಿ ಅಕ್ಟೋಬರ್ ತಿಂಗಳಲ್ಲಿ ಯೋಜಿಸಲಾಗಿತ್ತು. ಆದರೆ, ಈ ಯೋಜನೆಯನ್ನು ಮುಂದಿನ ವರ್ಷಕ್ಕೆ ಮುಂದೂಡಬೇಕು ಎಂದು ಅರ್ಜೆಂಟೀನಾ ತಂಡ ಬಯಸಿತ್ತು. ಅರ್ಜೆಂಟೀನಾ ತಂಡದ ಈ ಕೋರಿಕೆಗೆ ಸಮ್ಮತಿಸಲು ಪ್ರಾಯೋಜಕರು ಸಿದ್ಧರಿರಲಿಲ್ಲ ಎಂದು ಹೇಳಲಾಗಿದೆ.

ಸದ್ಯ ಸ್ಥಳೀಯ ಸಂಸ್ಥೆ ಚುನಾವಣೆಗಳು ಹಾಗೂ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವುದರಿಂದ, ಒಂದು ವೇಳೆ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವೇನಾದರೂ ಕೇರಳಕ್ಕೆ ಭೇಟಿ ನೀಡಿದ್ದರೆ, ಅದನ್ನೇ ದೊಡ್ಡ ಸಾಧನೆ ಎಂದು ಆಡಳಿತಾರೂಢ ಸಿಪಿಐ(ಎಂ) ಸರಕಾರ ಬಿಂಬಿಸಿಕೊಳ್ಳುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಆದರೆ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ನಿಯೋಗವು ಸ್ಪೇನ್ ಗೆ ಭೇಟಿ ನೀಡಲು ರಾಜ್ಯ ಸರಕಾರದ ಕ್ರೀಡಾಭಿವೃದ್ಧಿ ನಿಧಿಯಿಂದ 13.04 ಲಕ್ಷ ರೂ. ವೆಚ್ಚವಾಗಿದೆ ಎಂಬ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾಗಿರುವ ಅರ್ಜಿಗೆ ನೀಡಲಾಗಿದೆ. ಈ ವೇಳೆ, ಕ್ರೀಡಾ ಸಚಿವರೂ ಕೂಡಾ ಅರ್ಜೆಂಟೀನಾ ಫುಟ್ ಬಾಲ್ ಅಸೋಸಿಯೇಷನ್ ಅಧಿಕಾರಿಗಳನ್ನು ಭೇಟಿ ಮಾಡಿದ್ದ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಕೇರಳ, ವಿಶೇಷವಾಗಿ ಉತ್ತರ ಕೇರಳ ಜಿಲ್ಲೆಗಳಾದ ಮಲಪ್ಪುರಂ ಹಾಗೂ ಕೋಯಿಕ್ಕೋಡ್ ಜಿಲ್ಲೆಗಳು ತಮ್ಮ ಫುಟ್ ಬಾಲ್ ಹುಚ್ಚಿಗೆ ಹೆಸರುವಾಸಿಯಾಗಿವೆ. ಕಳೆದ ವಿಶ್ವಕಪ್ ಸಂದರ್ಭದಲ್ಲಿ ಕೋಯಿಕ್ಕೋಡ್ ನ ನದಿಯ ಬಳಿ ಬೃಹತ್ ಗಾತ್ರದ ಜನಪ್ರಿಯ ಫುಟ್ ಬಾಲ್ ಆಟಗಾರರ ಕಟೌಟ್ ಗಳನ್ನು ನಿಲ್ಲಿಸಿದ್ದದ್ದು ಫೀಫಾ ಗಮನವನ್ನೂ ಸೆಳೆದಿತ್ತು.

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News