ದಕ್ಷಿಣ ಆಫ್ರಿಕಾ-ಪಾಕಿಸ್ತಾನ ನಡುವಿನ 2ನೇ ಟೆಸ್ಟ್ : 7 ವಿಕೆಟ್‌ಗಳನ್ನು ಉರುಳಿಸಿದ ಕೇಶವ ಮಹಾರಾಜ್
ಕೇಶವ ಮಹಾರಾಜ್ | Photo Credit : AP \ PTI
ರಾವಲ್ಪಿಂಡಿ, ಅ. 21: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಹಾಗೂ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವು ಮಂಗಳವಾರ ತನ್ನ ಮೊದಲನೇ ಇನಿಂಗ್ಸನ್ನು 333 ರನ್‌ಗಳಿಗೆ ಮುಕ್ತಾಯಗೊಳಿಸಿದೆ. ಬಳಿಕ, ದಕ್ಷಿಣ ಆಫ್ರಿಕಾವು ತನ್ನ ಮೊದಲನೇ ಇನಿಂಗ್ಸ್‌ನಲ್ಲಿ 2ನೇ ದಿನದಾಟ ಮುಗಿದಾಗ 4 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾ ಈಗ 148 ರನ್ ಮೊದಲ ಇನಿಂಗ್ಸ್ ಹಿನ್ನಡೆಯಲ್ಲಿದೆ.
ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ ಮಹಾರಾಜ್ 7 ವಿಕೆಟ್‌ಗಳನ್ನು ಉರುಳಿಸಿದರು.
ದಿನದಾಟ ಮುಕ್ತಾಯಗೊಂಡಾಗ ದಕ್ಷಿಣ ಆಫ್ರಿಕಾದ ಟ್ರೈಸ್ಟನ್ ಸ್ಟಬ್ಸ್ 68 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಅವರು ಟೋನಿ ಡಿ ರೊರ್ಝಿ ಜೊತೆಗೆ 113 ರನ್‌ಗಳ ಭಾಗೀದಾರಿಕೆಯನ್ನು ನಿಭಾಯಿಸಿದರು. ರೊರ್ಜಿ 55 ರನ್‌ಗಳನ್ನು ಗಳಿಸಿದರು.
ತನ್ನ ಚೊಚ್ಚಲ ಟೆಸ್ಟ್ ಆಡುತ್ತಿರುವ 38 ವರ್ಷದ ಸ್ಪಿನ್ನರ್ ಆಸಿಫ್ ಅಫ್ರಿದಿ ದಿನದಾಟದ ಕೊನೆಯ ವೇಳೆಗೆ ದಕ್ಷಿಣ ಆಫ್ರಿಕದ ಎರಡು ಮಹತ್ವದ ವಿಕೆಟ್‌ಗಳನ್ನು ಪಡೆದರು. ಅವರ ಪಾದಾರ್ಪಣೆ ಪಂದ್ಯ ಸ್ಮರಣೀಯವಾಯಿತು. ಮೊದಲು ಅವರು ರೊರ್ಜಿಯನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು ಮತ್ತು ಬಳಿಕ, ಡೆವಾಲ್ಡ್ ಬ್ರೆವಿಸ್‌ರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ವಾಪಸ್ ಕಳುಹಿಸಿದರು.
ದಿನದಾಟ ಆರಂಭವಾದಾಗ, 5 ವಿಕೆಟ್‌ಗಳ ನಷ್ಟಕ್ಕೆ 259 ರನ್‌ನಿಂದ ಪಾಕಿಸ್ತಾನವು ತನ್ನ ಮೊದಲ ಇನಿಂಗ್ಸನ್ನು ಮುಂದುವರಿಸಿತು. ಸೌದ್ ಶಕೀಲ್ ಮತ್ತು ಅಘಾ ತಮ್ಮ ಆರನೇ ವಿಕೆಟ್ ಭಾಗೀದಾರಿಕೆಯನ್ನು 70 ರನ್‌ಗಳಿಗೆ ಹೆಚ್ಚಿಸಿದರು. ಶಕೀಲ್ 66 ರನ್‌ಗಳನ್ನು ಗಳಿಸಿದರು.
ಬೆಳಗಿನ ಅವಧಿಯ ಆಟದ ಮೇಲೆ ಕೇಶವ ಮಹಾರಾಜ್ ಪ್ರಾಬಲ್ಯ ಸಾಧಿಸಿದರು. ಅವರು ಕೇವಲ 15 ರನ್‌ಗಳನ್ನು ನೀಡಿ ಕೊನೆಯ 5 ವಿಕೆಟ್‌ಗಳನ್ನು ಉರುಳಿಸಿದರು.
ದಕ್ಷಿಣ ಆಫ್ರಿಕದ ಮೊದಲ ಇನಿಂಗ್ಸ್‌ಗೆ ನಾಯಕ ಏಡನ್ ಮರ್ಕ್ರಾಮ್ (32) ಉತ್ತಮ ಆರಂಭ ಒದಗಿಸಿದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಮೊದಲ ಇನಿಂಗ್ಸ್ 333
ಅಬ್ದುಲ್ಲಾ ಶಫೀಕ್ 57, ಶಾನ್ ಮಸೂದ್ 87, ಸೌದ್ ಶಕೀಲ್ 66, ಸಲ್ಮಾನ್ ಅಘಾ 45
ಕೇಶವ್ ಮಹಾರಾಜ್ 7-102, ಸೈಮನ್ ಹಾರ್ಮರ್ 2-75
ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ 185-4
ಏಡನ್ ಮರ್ಕ್ರಾಮ್ 32, ಟ್ರೈಸ್ಟನ್ ಸ್ಟಬ್ಸ್ (ಔಟಾಗದೆ) 68, ಟೋನಿ ಡಿ ರೊರ್ಜಿ 55
ಆಸಿಫ್ ಅಫ್ರಿದಿ 2-24